ಬೆಂಗಳೂರು: ಕೊಡಗಿಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ದಂಪತಿಯ ಮಕ್ಕಳು ಸಂಪ್ನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ದೂರದ ಯಾದಗಿರಿಯಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ದಂಪತಿಗೆ ಐದು ವರ್ಷದ ಗಂಡು ಹಾಗೂ ಒಂದು ವರ್ಷದ ಹೆಣ್ಣು ಮಗುವಿತ್ತು.
ಕೊಡಗಿಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಪೋಷಕರು ಕೂಲಿ ಕೆಲಸ ಮಾಡುವಾಗ ಕಟ್ಟಡದಲ್ಲೇ ಮಕ್ಕಳು ಆಟವಾಡಿಕೊಂಡಿದ್ದರು. ಅದೇ ಕಟ್ಟಡದ ಸಂಪ್ನಲ್ಲಿ ಬಿದ್ದು ಕಿರಿಚಿಕೊಂಡಾಗ ಕಟ್ಟಡದಲ್ಲಿದ್ದವರು ಕೂಡಲೆ ಇವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರಾದರು ಅಷ್ಟರಲ್ಲಾಗಲೆ ಮಕ್ಕಳು ಮೃತಪಟ್ಟಿದ್ದರು. ಮಕ್ಕಳ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.