ಬೆಂಗಳೂರು : ಸ್ಕೂಟಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇಲ್ಲಿನ ವಿಜಯನಗರದ ಪ್ರಶಾಂತನಗರದಲ್ಲಿ ಈ ಘಟನೆ ಜರುಗಿದೆ.
ಪಟ್ಟೆಗಾರಪಾಳ್ಯ ನಿವಾಸಿ ಮಿಥುನ್ ಎಂಬಾತನೇ ಮೃತ ಬೈಕ್ ಸವಾರ. ಈತ ಮೂರು ವರ್ಷಗಳಿಂದ ಪತ್ರಿಕಾ ವಿತರಕನಾಗಿದ್ದ. ಎದುರುಗಡೆ ಬೈಕ್‌ನಲ್ಲಿದ್ದ ಕಿರಣ್ ಮತ್ತು ಮಿಥುನ್ ಜೊತೆಗಿದ್ದ ಮತ್ತೊಬ್ಬ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿಥುನ್ ಸೋಮವಾರ ಬೆಳಗಿನ ಜಾವ ಮನೆ-ಮನೆಗೆ ಪತ್ರಿಕೆ ವಿತರಿಸಿ, ತನ್ನ ಸ್ನೇಹಿತನ ಜೊತೆಗೆ ಮನೆಗೆ ವಾಪಸ್ ಆಗುತ್ತಿದ್ದ. ಪ್ರಶಾಂತನಗರ ಕಡೆ ಬರುವಾಗ ಆಯತಪ್ಪಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಗುದ್ದಿದ ರಭಸಕ್ಕೆ ಮೂವರೂ ಕೆಳಗಡೆ ಬಿದ್ದು ಗಾಯಗೊಂಡಿದ್ದರು.
ಇದನ್ನು ನೋಡಿದ ಸ್ಥಳೀಯರು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಮಿಥುನ್ ಮೃತಪಟ್ಟಿದ್ದಾನೆ. ಈ ಘಟನೆ ಸಂಬಂಧ ವಿಜಯನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಪರಾಧಗಳ ತನಿಖೆಗೆ ಕಾಲಮಿತಿ: ಸಣ್ಣ ಪ್ರಕರಣಕ್ಕೆ 60 ದಿನ, ಗಂಭೀರ ಪ್ರಕರಣಕ್ಕೆ 90 ದಿನ ನಿಗದಿ ಪಡಿಸಿದ ಹೈಕೋರ್ಟ್!