ಬೆಂಗಳೂರು: ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಅಂತರದಲ್ಲಿ ಪ್ರತ್ಯೇಕ ಎರಡು ಕಡೆಗಳಲ್ಲಿ ನಡೆದ ಸ್ವಯಂಪ್ರೇರಿತ ಅಪಘಾತದಲ್ಲಿ ಇಬ್ಬರು ಆಟೋ ಚಾಲಕರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ವೇಗವಾಗಿ ಆಟೋ ಚಲಾಯಿಸಿ ನಿಯಂತ್ರಣ ತಪ್ಪಿದ ಪರಿಣಾಮ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರು ಚಾಲಕರು ಸಾವನ್ನಪ್ಪಿದ್ದಾರೆ. ಗೆಳೆಯರ ಬಳಗ ಬಡಾವಣೆಯ ಯಶಸ್ವಿನಿ ಜಂಕ್ಷನ್ ಬಳಿ ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ವೇಗವಾಗಿ ಹೋಗುತ್ತಿದ್ದ ಆಟೋ ನಿಯಂತ್ರಣ ತಪ್ಪಿ ಡಿವೈಡರ್ಗೆ ಗುದ್ದಿದ ಪರಿಣಾಮ ಚಾಲಕ ರಂಗನಾಥ್ (46) ಸಾವನ್ನಪ್ಪಿದ್ದಾರೆ.
ಚಂದ್ರಾಲೇಔಟ್ನ ಮಾರುತಿನಗರದ ನಿವಾಸಿಯಾಗಿರುವ ರಂಗನಾಥ್ ಆಟೋ ಚಲಾಯಿಸಿ ಜೀವನ ಸಾಗಿಸುತ್ತಿದ್ದರು. ನಿನ್ನೆ ರಾತ್ರಿ ಯಶವಂತಪುರಕ್ಕೆ ಬಾಡಿಗೆಗಾಗಿ ಹೋಗುವಾಗ ಅಜಾಗರೂಕತೆಯಿಂದ ವಾಹನ ಚಲಾಯಿಸಿ ತನ್ನ ಸಾವಿಗೆ ತಾನೇ ಕಾರಣನಾಗಿದ್ದಾನೆ. ಚಾಲಕ ಮದ್ಯಸೇವನೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿಲ್ಲ. ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಮದ್ಯಸೇವನೆ ಮಾಡಿರುವ ಬಗ್ಗೆ ಗೊತ್ತಾಗಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಕುಡಿದು ವಾಹನ ಚಾಲನೆ, ಅಪಘಾತ; ಮತ್ತೋರ್ವ ಆಟೋ ಚಾಲಕ ಸಾವು: ಕುಡಿದ ಮತ್ತಿನಲ್ಲಿ ವೇಗವಾಗಿ ಆಟೋ ಚಲಾಯಿಸಿದ ಪರಿಣಾಮ ರಸ್ತೆ ವಿಭಜಕಕ್ಕೆ ಗುದ್ದಿ ಚಾಲಕ ನಂಜುಂಡಸ್ವಾಮಿ ಸಾವನ್ನಪ್ಪಿದ್ದಾರೆ. ಜುಲೈ 4ರ ಮಧ್ಯರಾತ್ರಿ ಈ ದುರಂತ ಸಂಭವಿಸಿದೆ. ಮೃತ ನಂಜುಂಡಸ್ವಾಮಿ ಸೇರಿ ಮೂವರು ಪಾರ್ಟಿ ಮಾಡಿದ್ದಾರೆ. ತಡರಾತ್ರಿವರೆಗೂ ನಡೆದಿದ್ದ ಪಾರ್ಟಿ ಮುಗಿಸಿಕೊಂಡು ಅದೇ ಗುಂಗಿನಲ್ಲಿ ಮೂವರು ಆಟೋದಲ್ಲಿ ಮನೆಗಳತ್ತ ಪ್ರಯಾಣ ಬೆಳೆಸಿದ್ದರು.
ಲಗ್ಗೆರೆ ಬ್ರಿಡ್ಜ್ ಬಳಿ ಏಕಮುಖ ಮಾರ್ಗವಾಗಿ ವೇಗವಾಗಿ ಆಟೋ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡ ಆಟೋ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಂಜುಂಡಸ್ವಾಮಿ ಸಾವನ್ನಪ್ಪಿದರೆ, ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿವೆ. ಅಪಘಾತದ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದೆ. ಈ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಹಾಗೂ ಆಟೋ ನಡುವೆ ಭೀಕರ ರಸ್ತೆ ಅಪಘಾತ : ಇನ್ನೊಂದೆಡೆ ಕ್ಯಾಂಟರ್ ಲಾರಿ ಹಾಗೂ ಆಟೋ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದ ಘಟನೆ (ಜೂನ್ 16-2023) ರಂದು ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿತ್ತು. ನಗರದ ಕುಂಟಮ್ಮದ ತೋಟದ ನಿವಾಸಿಗಳಾದ ಶಾಂತಲಕ್ಷ್ಮಿ (30) ಹಾಗೂ ಚಿನ್ಮಯಿ (5) ಮೃತರು ಎಂಬುದು ತಿಳಿದುಬಂದಿತ್ತು.
ಅಂದು ರಾತ್ರಿ 11 ಗಂಟೆ ಸುಮಾರಿಗೆ ಭೀಮಸಂದ್ರದಲ್ಲಿ ಸಂಬಂಧಿಕರ ಮದುವೆ ಮುಗಿಸಿ ಆಟೋದಲ್ಲಿ ನಾಲ್ವರು ತುಮಕೂರು ನಗರಕ್ಕೆ ಬರುತ್ತಿದ್ದರು. ತುಮಕೂರು ಕಡೆಯಿಂದ ಹೋಗುತ್ತಿದ್ದ ಕ್ಯಾಂಟರ್ ಲಾರಿಯ ಬ್ರೇಕ್ ಕಟ್ ಆಗಿ ಆಟೋಗೆ ಡಿಕ್ಕಿ ಹೊಡೆದಿತ್ತು. ಶಾಂತಲಕ್ಷ್ಮೀ ಅವರ ಪುತ್ರ ತನ್ಮಯ್ ಹಾಗೂ ಆಟೋ ಚಾಲಕ ಗಿರೀಶ್ ಗಂಭೀರ ಗಾಯಗೊಂಡಿದ್ದರು. ತಾಯಿ ಮತ್ತು ಮಗಳು ಸ್ಥಳದಲ್ಲೇ ಅಸುನೀಗಿದ್ದರು. ತನ್ಮಯ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗಿರೀಶ್ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Tumkur accident: ತುಮಕೂರಿನಲ್ಲಿ ಲಾರಿ-ಆಟೋ ನಡುವೆ ಭೀಕರ ರಸ್ತೆ ಅಪಘಾತ; ತಾಯಿ, ಮಗಳು ಸ್ಥಳದಲ್ಲೇ ಸಾವು