ಬೆಂಗಳೂರು: ರೈಲಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ಇಬ್ಬರು ಪೆಡ್ಲರ್‌ಗಳನ್ನು ನಗರದ ದಂಡು ರೈಲ್ವೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಉಪೇಂದ್ರ ಕಾರಡ್ (50) ಹಾಗೂ ರಂಜನ್ ಬೆಬಾರ್ತ್(56) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 15.5 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ಪ್ರಯಾಣಿಕರ ಸೋಗಿನಲ್ಲಿ ಪ್ರಶಾಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ಒಡಿಶಾದಿಂದ ನಗರಕ್ಕೆ ಗಾಂಜಾ ತಂದಿದ್ದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಅನುಮಾನದ ಮೇರೆಗೆ ತಪಾಸಣೆ: ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಪ್ರಶಾಂತಿ ಎಕ್ಸ್ಪ್ರೆಸ್ ರೈಲು ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣ ತಲುಪಿತ್ತು. ಈ ವೇಳೆ ಆರೋಪಿಗಳು ರೈಲಿನಿಂದ ಇಳಿದು ಗಾಂಜಾ ತುಂಬಿದ್ದ ಬ್ಯಾಗ್ ಹಿಡಿದು 1ನೇಯ ಪ್ಲಾಟ್ ಫಾರ್ಮ್‌ನತ್ತ ಬರುತ್ತಿದ್ದರು. ಆಗ ಅನುಮಾನಗೊಂಡು ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಗಾಂಜಾ ಪೊಟ್ಟಣಗಳು ಪತ್ತೆಯಾಗಿವೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳು ಒಡಿಶಾದಿಂದ ಗಾಂಜಾ ತಂದಿರುವುದಾಗಿ ಬಾಯ್ಬಿಟ್ಟಿದ್ದಾರೆ. ನಗರದಲ್ಲಿ ಯಾರಿಗೆಲ್ಲ ಮಾರಾಟ ಮಾಡಲು ತಂದಿದ್ದರು ಎಂಬ ಮಾಹಿತಿ ಸಂಗ್ರಹಿಸಬೇಕಿದೆ. ರೈಲ್ವೆ ಎಸ್ಪಿ ಸಿರಿಗೌರಿ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಶೃಂಗೇರಿ ತಹಸೀಲ್ದಾರ್ ಕಾರು ಚಾಲಕ ಆತ್ಮಹತ್ಯೆಗೆ ಶರಣು.. ಕಾರಣ ನಿಗೂಢ!