ಬೆಂಗಳೂರು : ಮಲಗುವ ಜಾಗದ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಇಬ್ಬರು ಆರೋಪಿಗಳನ್ನು ಆರ್.ಟಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಕಮ್ರಾನ್ ಹಾಗೂ ವಿಶಾಲ್ ಅಹಿವದಾಸ್ ಬಂಧಿತ ಆರೋಪಿಗಳು.
ಡಿಸೆಂಬರ್ 11ರಂದು ರಾತ್ರಿ ಆರ್.ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಪ್ಪ ಕಾಂಪ್ಲೆಕ್ಸ್ ಬಿಲ್ಡಿಂಗ್ ತಳಮಹಡಿಯಲ್ಲಿ ಸುಮಾರು 55-60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿತ್ತು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿ ಪ್ರತಿ ದಿನ ಆರ್.ಟಿ ನಗರ ಕೃಷ್ಣಪ್ಪ ಕಾಂಪ್ಲೆಕ್ಸ್ ಬಿಲ್ಡಿಂಗ್‌ನ ತಳಮಹಡಿಯಲ್ಲಿ ಮಲಗಿಕೊಳ್ಳುತ್ತಿದ್ದರು. ಡಿಸೆಂಬರ್ 11ರಂದು ರಾತ್ರಿ ತಾವು ಮಲಗಿಕೊಳ್ಳುತ್ತಿದ್ದ ಜಾಗದಲ್ಲಿ ಕೊಲೆಯಾದ ವ್ಯಕ್ತಿಯು ಮಲಗಿದ್ದಕ್ಕೆ ಗಲಾಟೆ ಮಾಡಿಕೊಂಡು ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳ ಪೈಕಿ ಒಬ್ಬ ಈ ಹಿಂದೆ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು, ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಮತ್ತೊಬ್ಬ ಆರೋಪಿಯ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಕಿರುಕುಳ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ. ಕೊಲೆಯಾದ ಅಪರಿಚಿತ ವ್ಯಕ್ತಿಯ ಮಾಹಿತಿಯ ಪತ್ತೆಕಾರ್ಯ ಮುಂದುವರೆದಿದೆ.
ಮದ್ಯಪಾನ ಮಾಡುವುದನ್ನು ಪ್ರಶ್ನಿಸಿದ ಯುವಕನ ಹತ್ಯೆ : ಬುಧವಾರ ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತ ಕಾಲೊನಿ ಎಂಬಲ್ಲಿ ಯುವಕನೊಬ್ಬನನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ಸಾರಸ್ವತ ಕಾಲೊನಿ ನಿವಾಸಿ ವರುಣ್ (28) ಹತ್ಯೆಯಾದ ಯುವಕ. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೊಲ್ಯದ ಖಾಸಗಿ ಶಾಲೆಯೊಂದರ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ಮಾಡುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ 5 ಮಂದಿಯ ನಡುವೆ ವಾಗ್ವಾದ ನಡೆದು ಸೂರಜ್, ವರುಣ್ ಹೃದಯಭಾಗಕ್ಕೆ ಚೂರಿಯಿಂದ ತಿವಿದು ಹತ್ಯೆ ಮಾಡಿದ್ದಾನೆ. ಹಳೇ ವೈಷಮ್ಯದಿಂದ ಕೃತ್ಯ ನಡೆದಿರುವ ಸಾಧ್ಯತೆಗಳಿದೆ. ಸೋಮೇಶ್ವರ ಪುರಸಭೆಗೆ ಡಿ. 27 ಕ್ಕೆ ಚುನಾವಣೆಯೂ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೆಲವೇ ದಿನಗಳು ಬಾಕಿಯಿದೆ. ಈ ಸಂಬಂಧ ಗಲಾಟೆ ನಡೆದಿರುವ ಸಾಧ್ಯತೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಸೋಮೇಶ್ವರ ಗ್ರಾ.ಪಂ ಮಾಜಿ ಸದಸ್ಯ ರವಿರಾಜ್ ಎಂಬವರಿಗೂ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ : ಚಿಕ್ಕಮಗಳೂರು: ಊಟದಲ್ಲಿ ಸೈನೈಡ್ ಬೆರೆಸಿ ಪತ್ನಿಯ ಕೊಲೆ.. ಪತಿ ಬಂಧನ