ಬೆಂಗಳೂರು: ಎನ್‌ಟಿಐ ಹೌಸಿಂಗ್ ಸೊಸೈಟಿ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಾರ್ಪೋರೇಟ್ ಮಾದರಿಯಲ್ಲಿ ಬಂಧಿತ ರಿಯಲ್ ಎಸ್ಟೇಟ್ ಆರೋಪಿಗಳು ದಂಧೆಗಿಳಿದಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ವಂಚನೆಗೊಳಗಾದ ಸೈಟ್ ಮಾಲೀಕ ಪೊಲೀಸ್ ಪಾಟೀಲ್ ಎನ್ನುವವರು ವಂಚಕರ ತಂತ್ರಕ್ಕೆ ಸದ್ಯ ಸೈಟ್ ಮಾಲೀಕರು ಹೈರಣಾಗಿದ್ದಾರೆ. ಖಾಲಿ ಸೈಟು ಕಂಡರೆ ಸಾಕು ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳು ಕಬ್ಜಾ ಮಾಡುತ್ತಿದ್ದಾರೆ. ಬೆಳಗ್ಗೆ ಸೊಸೈಟಿಗೆ ಸದಸ್ಯತ್ವ ಪಡೆದು ಮಧ್ಯಾಹ್ನ ನಿವೇಶನ ಮಂಜೂರು ಮಾಡಿದ್ದಾರೆ ಎನ್ನುವ ಗುರುತರ ಆರೋಪ ಮಾಡಿದ್ದಾರೆ.
ಬೋಗಸ್ ನೋಂದಣಿ ಮಾಡಿರುವ ಆರೋಪ: ಕೊಡಿಗೆಹಳ್ಳಿಯೊಂದರಲ್ಲೇ 6 ನಿವೇಶನಗಳ ಅಕ್ರಮ ಹಂಚಿಕೆ ಮಾಡಲಾಗಿದೆ. ಇವು 1983ರಲ್ಲೇ ಬೇರೆ ಬೇರೆ ಹೆಸರಿನಲ್ಲಿ ನೋಂದಣಿಯಾಗಿದ್ದ ನಿವೇಶನಗಳಾಗಿದ್ದವು. ನಂತರದಲ್ಲಿ ಸರ್ಕಾರಿ ಜಮೀನು ಎಂಬುದಾಗಿ ನಮೂದಿಸಲಾಗಿತ್ತು. ಡಿ.ಸಿ. ಕೋರ್ಟ್ನಲ್ಲಿ ಸರ್ಕಾರಿ ಜಮೀನು ಎಂದು ಘೋಷಿಸಲ್ಪಟ್ಟಿತ್ತು. ಈ ನಡುವೆ ಅದೇ ನಿವೇಶನಗಳನ್ನ ಎನ್‌ಟಿಐ ಹೌಸಿಂಗ್ ಸೊಸೈಟಿ ಇತರರಿಗೆ ಬೋಗಸ್ ನೋಂದಣಿ ಮಾಡಿದೆ ಎಂದು ಆರೋಪಿಸಿದ್ದಾರೆ. ಸದಸ್ಯರೇ ಅಲ್ಲದವರಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಎನ್ಟಿಐಯಿಂದ ಅಕ್ರಮವಾಗಿ ಸೈಟ್ ಪಡೆದಿರುವ ದಂಧೆಕೋರರಿಂದ ಸೈಟ್ ಮಾಲೀಕರಿಗೆ ಕಿರುಕುಳ ನೀಡಲಾಗುತ್ತಿದೆ.
ಏನಿದು ಎನ್‌ಟಿಐ ಹೌಸಿಂಗ್ ಸೊಸೈಟಿ ಪ್ರಕರಣ: ಎನ್‌ಟಿಐ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಬಿಡಿಎನಿಂದ ಅನುಮೋದಿತ ನಕ್ಷೆಯಲ್ಲಿ ರಚನೆ ಮಾಡದೇ ಇರುವ ನಿವೇಶನಗಳನ್ನು ಕೆಲ ಸದಸ್ಯರಿಗೆ ಹಂಚಿಕೆ ಮಾಡಿದ ಆರೋಪದ ಮೇಲೆ ಕಳೆದ ವಾರ ಸಂಘದ ಒಬ್ಬ ನಿರ್ದೇಶಕರು, ಸಿಇಒ ಸೇರಿ ಇಬ್ಬರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದರು. ಸಹಕಾರ ಸಂಘದ ಹಾಲಿ ನಿರ್ದೇಶಕ ರಾಮಕೃಷ್ಣ ರೆಡ್ಡಿ ಮತ್ತು ಸಂಘದ ಸಿಇಒ ಪ್ರತಾಪ್ ಚಂದ್ ರಾಥೋಡ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಮಾಜಿ ನಿರ್ದೇಶಕ ನಾಣಯ್ಯ ಎಂಬುವರು ನೀಡಿದ ದೂರಿನ ಮೇರೆಗೆ ಗೃಹ ನಿರ್ಮಾಣ ಸಹಕಾರ ಸಂಘದ ಹಾಲಿ ನಿರ್ದೇಶಕರಾದ ಎಚ್.ಎಂ.ಶೃಂಗೇಶ್ವರ, ರಾಮಕೃಷ್ಣರೆಡ್ಡಿ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಸಿಇಒ ಪ್ರತಾಪ್ ಚಂದ್ ರಾಥೋಡ್ ಎನ್‌ಟಿಐ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಎಚ್.ಎಂ.ಶೃಂಗೇಶ್ವರ, ಉಪಾಧ್ಯಕ್ಷರಾಗಿದ್ದ ಕೆ.ಎನ್.ರಾಮಕೃಷ್ಣ ರೆಡ್ಡಿ (ಇಬ್ಬರು ಹಾಲಿ ನಿರ್ದೇಶಕರು) ಹಾಗೂ ಸಿಇಒ ಆದ ಪ್ರತಾಪ್ ಚಂದ್ ರಾಥೋಡ್ನನ್ನ ಗಮನಕ್ಕೆ ಬಾರದಂತೆ ಅಕ್ರಮ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬಿಡಿಎ ವತಿಯಿಂದ 2010 ಮಾರ್ಚ್ 4 ರಂದು ನಕ್ಷೆ ಮಂಜೂರಾತಿಗೆ ಆದೇಶವಾಗಿದೆ.
ಇದನ್ನೂ ಓದಿ: ಹೌಸಿಂಗ್ ಸೊಸೈಟಿ ಹೆಸರಿನಲ್ಲಿ ವಂಚನೆ: ನಿರ್ದೇಶಕ ಅರೆಸ್ಟ್, ಮಾಜಿ ಅಧ್ಯಕ್ಷ ಎಸ್ಕೇಪ್
ಈ ನಿವೇಶನಗಳನ್ನು ಹೊರತುಪಡಿಸಿ, ಬಿಡಿಎ ಅನುಮೋದಿತ ನಕ್ಷೆಯಲ್ಲಿ ರಚನೆ ಮಾಡದೇ ಇರುವ ನಿವೇಶನಗಳಾದ ಕೊಡಿಗೇಹಳ್ಳಿ, ಎನ್‌ಟಿಐ ಲೇಔಟ್ 1 ನೇ ಬ್ಲಾಕ್ ಮತ್ತು 2ನೇ ಬ್ಲಾಕ್‌ನಲ್ಲಿರುವ ನಿವೇಶನಗಳಾದ 613 ಅನ್ನು ಶಿವಸ್ವಾಮಿ, 50ನ್ನು ಗೋಪಾಲಕೃಷ್ಣ, ನಿವೇಶನ 71 ಬಿ. ಭಾರತಿ, 63ನೇ ನಿವೇಶನ ಮುನಿರಾಜು ವೆಂಕಪ್ಪ ಎಂಬುವರಿಗೆ 2022ನೇ ಸಾಲಿನಲ್ಲಿ ಸಂಘದಿಂದ ನೋಂದಣಿ ಮಾಡಿಕೊಡಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ಮೂಲಕ ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎಂದು ನಾಣಯ್ಯ ದೂರಿನಲ್ಲಿ ಆರೋಪಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಉಳಿದವರಿಗಾಗಿ ಶೋಧ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದಾರೆ.