ಬೆಂಗಳೂರು: ಬಸವನಗುಡಿ ಸಮೀಪದ ಅಪಾರ್ಟ್ಮೆಂಟ್ ಟೆರೇಸ್ ಮೇಲೆ ಹದಿನೈದರಿಂದ ಇಪ್ಪತ್ತು ಕೋತಿಗಳು ವಿಷಾಹಾರ ಸೇವಿಸಿ ಅಸ್ವಸ್ಥಗೊಂಡಿವೆ. ಯಾರೋ ಕಿಡಿಗೇಡಿಗಳು ಮಾಡಿರುವ ಈ ಕೃತ್ಯಕ್ಕೆ ಈಗಾಗಲೇ ಎರಡು ಕೋತಿಗಳು ಸಾವನ್ನಪ್ಪಿದ್ದು, ಎರಡು ಕೋತಿಗಳನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.
ಬೆಳಗ್ಗೆ 10:30ರ ವೇಳೆಗೆ ಬಿಬಿಎಂಪಿ ಸಹಾಯವಾಣಿಗೆ ಈ ದೂರಿನ ಕರೆ ಬಂದಿತ್ತು. ಬಿಬಿಎಂಪಿ ಅರಣ್ಯ ಘಟಕದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾರೋ ಕಿಡಿಗೇಡಿಗಳು ಕೋತಿಗಳಿಗೆ ವಿಷಮಿಶ್ರಿತ ಆಹಾರ ನೀಡಿದ್ದು ಪತ್ತೆಯಾಗಿದ್ದು, ಇನ್ನು ಕಿಡಿಗೇಡಿಗಳ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಹಿನ್ನೆಲೆ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಬಂಧಿಸಲಾಗುವುದೆಂದು ಪೊಲೀಸ್ ಠಾಣಾ ಸಿಬ್ಬಂದಿ ಭರವಸೆ ನೀಡಿದ್ದಾರೆ.
ಇನ್ನು ಕೆಲವು ಕೋತಿಗಳು ಮರದ ಮೇಲೆಯೇ ಅಸ್ವಸ್ಥಗೊಂಡು, ಕೆಲವು ಕೆರಳಿದ ರೂಪದಲ್ಲಿವೆ. ಅವುಗಳನ್ನು ರಕ್ಷಿಸಿ, ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ಬಿಬಿಎಂಪಿ ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.