ತುಮಕೂರು/ಮೈಸೂರು/ಮಂಡ್ಯ/ಬೆಂಗಳೂರು : ದೇಶದಲ್ಲಿ ಈ ಸಾರಿಯೂ ಆರಂಭಿಕವಾಗಿ ನರೇಂದ್ರ ಮೋದಿ ಅಲೆಯೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇತ್ತ ಕರ್ನಾಟಕದಲ್ಲೂ ಕೇಸರಿ ಪಾರ್ಟಿ ಕಮಾಲ್ ಮಾಡುತ್ತಿದೆ. ಆದರೆ, ನಾಲ್ಕು ಕ್ಷೇತ್ರಗಳಾದ ತುಮಕೂರು, ಮೈಸೂರು, ಮಂಡ್ಯ ಮತ್ತು ಬೆಂಗಳೂರು ಉತ್ತರಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳ ಮಧ್ಯೆ ಹಾವು-ಏಣಿಯಾಟ ನಡೆದಿದೆ.
ಕರ್ನಾಟಕದಲ್ಲಿ ಮೂರಕ್ಕೂ ಹೆಚ್ಚು ಸುತ್ತಿನ ಮತ ಎಣಿಗೆ ಮುಗಿದಿದೆ.
ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಬಿಜೆಪಿ ಕ್ಯಾಂಡಿಡೇಟ್ ಜಿ.ಎಸ್ ಬಸವರಾಜು ಮಧ್ಯೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ. ಒಮ್ಮೆ ಬಿಜೆಪಿ ಲೀಡ್ ಇದ್ರೇ, ಮತ್ತೊಂದು ಸಾರಿ ಮೈತ್ರಿ ಅಭ್ಯರ್ಥಿ ದೇವೇಗೌಡರು ಮುನ್ನಡೆ ಸಾಧಿಸ್ತಿದ್ದಾರೆ. ಆದರೆ, ಇಲ್ಲಿ ಯಾರೇ ಈವರೆಗೂ ಮುನ್ನಡೆ ಕಾಯ್ದುಕೊಂಡರೂ ಕೆಲವೇ ಮತಗಳಲ್ಲಿ ಮಾತ್ರ. ಹಾಗಾಗಿ ತುಮಕೂರಿನಲ್ಲಿ ಫಲಿತಾಂಶ ಏನಾಗುತ್ತೆ ಅಂತಾ ಈಗಲೇ ಹೇಳೋದು ಕಷ್ಟ.
ವಿಜಯ-ಸಿಂಹ ನಡುವೆ ಟೈಟ್ ಫೈಟ್
ಅತ್ತ ಮೈಸೂರಿನಲ್ಲೂ ಇದೇ ಸ್ಥಿತಿಯಿದೆ. ಮೈತ್ರಿ ಅಭ್ಯರ್ಥಿ ಸಿ.ಎಸ್ ವಿಜಯಶಂಕರ್ ಆರಂಭದಲ್ಲಿ ಮೂರು ಸಾವಿರದಷ್ಟು ಮತಗಳಿಂದ ಮುನ್ನಡೆ ಸಾಧಿಸಿದ್ದರು. ಇದಾದ ಮೇಲೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 12 ಸಾವಿರ ಮತಗಳಿಂದ ಮುಂದಿದ್ದರು. ಈಗ ಮೂರನೇ ಸುತ್ತಿನ ಬಳಿಕ ಮೈತ್ರಿ ಅಭ್ಯರ್ಥಿ ಸುಮಾರು 3 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
500 ಮತಗಳ ಮುನ್ನಡೆ ಕಾಯ್ದುಕೊಂಡ ಸುಮಲತಾ:
ಇಡೀ ಭಾರತದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಮತ್ತು ಪಕ್ಷೇತರ ಕ್ಯಾಂಡಿಡೇಟ್ ಸುಮಲತಾ ಅಂಬರೀಷ್ ಮಧ್ಯೆ ಕದನ ರಂಗೇರಿದೆ. ಆರಂಭದಲ್ಲಿ ನಿಖಿಲ್ 2 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದರು. ಆದರೆ, ಈಗ 500ಕ್ಕೂ ಹೆಚ್ಚು ಮತಗಳಿಂದ ಸುಮಲತಾ ಅಂಬರೀಷ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹಾಗಾಗಿ ಮಂಡ್ಯ ಏನಾಗುತ್ತೋ ಅಂತಾ ಹೇಳೋಕಾಗಲ್ಲ.
ಡಿವಿಎಸ್-ಬೈರೇಗೌಡ ತೂಗುಯ್ಯಾಲೆ
ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ತೀವ್ರ ಕುತೂಹಲ ಫೈಟ್ ನಡೆಯುತ್ತಿದೆ. ಕೇಂದ್ರ ಸಚಿವ ಸದಾನಂದಗೌಡ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಈಗ ಮೈತ್ರಿ ಅಭ್ಯರ್ಥಿಯಾಗಿರುವ ಕೃಷ್ಣ ಬೈರೇಗೌಡ ಲೀಡ್ ಪಡೆದುಕೊಂಡಿದ್ದಾರೆ. ಒಂದ್ಸಾರಿ ಅವರು ಇನ್ನೊಂದ್ಸಾರಿ ಇವರು ಲೀಡ್ ಪಡೆಯುತ್ತಿರುವುದರಿಂದ ತುಮಕೂರು, ಮೈಸೂರು, ಮಂಡ್ಯ ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಫಲಿತಾಂಶ ತೀವ್ರ ಕುತೂಹಲವನ್ನ ಉಳಿಸಿಕೊಂಡಿದೆ.