ಬೆಂಗಳೂರು: ಪ್ರಾಧ್ಯಾಪಕರು, ಸಾಹಿತಿಗಳು, ಆತ್ಮೀಯರೂ ಆದ ಸಹೃದಯಿ, ಕನ್ನಡಪರ ಚಿಂತಕ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷರಾದ ಕೋ.ವೆಂ.ರಾಮಕೃಷ್ಣೇಗೌಡರ ಅಕಾಲಿಕ ನಿಧನದಿಂದ ಮನಸ್ಸಿಗೆ ತುಂಬಾ ನೋವುಂಟಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ರಾಮಕೃಷ್ಣೇಗೌಡರು ಸಾಕಷ್ಟು ಕನ್ನಡಪರ ಹೋರಾಟ, ಚಳವಳಿಗಳಲ್ಲಿ ತೊಡಗಿಸಿಕೊಂಡು ಕನ್ನಡ ನಾಡು - ನುಡಿಗಾಗಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಇಂತಹ ಕನ್ನಡ ಪರಿಚಾರಕ, ಚಿಂತಕ ಇಂದು ಕೊರೊನಾ ಮಾರಕ ರೋಗಕ್ಕೆ ತುತ್ತಾಗಿ ನೆನಪಿನಂಗಳಕ್ಕೆ ಜಾರಿದ್ದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಚಿತ್ರಗಳು, ಭಾವಗೀತೆ ಕ್ಯಾಸೆಟ್ಗಳು ಸೇರಿದಂತೆ 40ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿರುವ ರಾಮಕೃಷ್ಣೇಗೌಡರ ಸಾಹಿತ್ಯ ಸೇವೆ ಅನನ್ಯವಾದದ್ದು ಎಂದು ಬಣ್ಣಿಸಿದ್ದಾರೆ.
ಕನ್ನಡಪರ ಹೋರಾಟ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಚಾರಕರಾಗಿದ್ದ ಗೌಡರು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹಲವಾರು ಸೃಜನಶೀಲ ಕೃತಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಸದಾ ಕ್ರಿಯಾಶೀಲವಾಗಿ ಹಸನ್ಮುಖರಾಗಿ ಇರುತ್ತಿದ್ದ ಆತ್ಮೀಯ ಗೆಳೆಯ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.