ಬೆಂಗಳೂರು: ಡಾ.ರಾಜ್ ಕುಮಾರ್ ಕಾಲದಿಂದಲೂ ಕನ್ನಡ ಚಿತ್ರರಂಗವನ್ನು ಭೂತವಾಗಿ ಕಾಡುತ್ತಿರುವುದು ಡಬ್ಬಿಂಗ್ ಸಂಸ್ಕೃತಿ. ಈಗ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಹಾವಳಿ ಹೆಚ್ಚಾಗಿದ್ದು ವೆಬ್ ಸೀರಿಸ್, ಸೀರಿಯಲ್, ಸಿನಿಮಾಗಳ ಹಾವಳಿ ಜೋರಾಗಿದೆ.
ಹೀಗಾಗಿ ಡಬ್ಬಿಂಗ್ ಸಿನಿಮಾಗಳಿಗೆ ಪೈಪೋಟಿ ಕೊಡುವ ಗಟ್ಟಿತನದ ಸಿನಿಮಾಗಳನ್ನು ಮಾಡಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ.
ಆ ಕಾಲದಲ್ಲಿ ಸಿನಿಮಾ ಬಂದರೆ ನಾಟಕ ನಿಂತು ಹೋಗುತ್ತೆ ಅಂತ ಹೇಳುತ್ತಿದ್ದರು. ಹಾಗೆಯೇ ಟಿವಿ ಬಂದಾಗ ಸಿನಿಮಾಗಳಿಗೆ ಎಫೆಕ್ಟ್ ಆಗುತ್ತೆ ಅಂತಲೂ ಹೇಳುತ್ತಿದ್ದರು. ಆದರೆ ಅದ್ಯಾವುದೂ ಆಗಿಲ್ಲ.
ಕುವೆಂಪು ಹೇಳಿದಂತೆ ಕಣ್ಣು, ಕಿವಿ, ಮೂಗು ತೆರೆಯಬೇಕು. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಬೇಕು. ಆಗ ಮಾತ್ರ ಜ್ಞಾನ ವೃದ್ಧಿಯಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕಥೆ, ಕ್ವಾಲಿಟಿ ಹಾಗೂ ಸಿನಿಮಾ ಮಾಡಲು ಶ್ರಮ ವಹಿಸಿ ಶ್ರದ್ಧೆಯಿಂದ ಕೆಲಸ ಮಾಡಬೇಕು. ಈ ಮೂಲಕ ಡಬ್ಬಿಂಗ್ ಸಿನಿಮಾಗಳಿಗೆ ಪೈಪೋಟಿ ಕೊಡುವ ಸಿನಿಮಾಗಳು ತಯಾರಾಗಬೇಕು ಎಂದಿದ್ದಾರೆ.
ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ ಜತೆಗೂಡಿ ಕೆಲಸ ಮಾಡಬೇಕಿದೆ. ಇಂತಹ ಸಮಯದಲ್ಲಿ ಶಿವರಾಜ್ ಕುಮಾರ್ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿರೋದು ಒಳ್ಳೆಯ ಬೆಳವಣಿಗೆ. ಮುಂದಿನ 15 ವರ್ಷದಲ್ಲಿ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬೆಳೆಯುವ ಸೂಚನೆ ನಾಗಾಭರಣ ಹೇಳಿದ್ದಾರೆ.