ಬೆಂಗಳೂರು: ಹೆಬ್ಬಾಳ ಫ್ಲೈ ಓವರ್ ಮೇಲೆ ವೇಗವಾಗಿ ಚಲಾಯಿಸುತ್ತಿದ್ದ ಕಸದ ಲಾರಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಕಾರಿನ ಮೇಲೆ ಪಲ್ಟಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಅಪಘಾತದ ರಭಸಕ್ಕೆ ಮೇಲ್ಸೇತುವೆಯ ಡಿವೈಡರ್ ಮೇಲೆ ಲಾರಿ ಸಿಲುಕಿಕೊಂಡಿದೆ. ಅದೃಷ್ಟವಶಾತ್ ಲಾರಿ ಫ್ಲೈ ಓವರ್ನಿಂದ ಕೆಳಗೆ ಬಿದ್ದಿಲ್ಲ. ಒಂದು ವೇಳೆ ಟ್ರಕ್ ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದ್ರೆ ದೊಡ್ಡ ದುರಂತ ಸಂಭವವಿಸುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇಂದು ಮಧ್ಯಾಹ್ನ ನಗರದ ಕಡೆಯಿಂದ ಕಸದ ಲಾರಿಯು ಹೆಬ್ಬಾಳ ಮೇಲ್ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡಿದೆ. ಬಳಿಕ ಡಿವೈಡರ್ಗೆ ಡಿಕ್ಕಿ ಹೊಡೆದು ಮುಂದೆ ಹೋಗುತ್ತಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಘಟನೆಯಲ್ಲಿ ಕಾರು ಬಹುತೇಕ ನಜ್ಜು ಗುಜ್ಜಾಗಿದ್ದು, ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಹೆಬ್ಬಾಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಈ ಘಟನೆ ಕುರಿತು ಹೆಬ್ಬಾಳ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ.