ಬೆಂಗಳೂರು: ದೆಹಲಿಯಿಂದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಶ್ರಮಿಕ್ ರೈಲು ಆಗಮನ ಹಿನ್ನೆಲೆ, ರೈಲಿನಲ್ಲಿ ಬಂದವರನ್ನ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಹಾಗೂ ಪೊಲೀಸರು ಮುಂದಾಗಿದ್ದು ಬಹುತೇಕ ಮಂದಿ ಆಕ್ರೋಶ ಹೊರಹಾಕಿದ್ದಾರೆ.
ಎಂಟ್ರಿ ಮತ್ತು ಎಕ್ಸಿಟ್ ಗೇಟ್ಗಳಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಭದ್ರತೆ ಕೈಗೊಂಡಿರುವ ಪೊಲೀಸರು ಬಿಎಂಟಿಸಿ ಬಸ್ಗಳ ಮೂಲಕ ನಿಗದಿತ ಹೋಟೆಲ್ಗಳಿಗೆ ಕ್ವಾರಂಟೈನ್ಗೆ ಕರೆದುಕೊಂಡು ಹೋಗಲಿದ್ದಾರೆ.
ಆದರೆ ರೈಲಿನಲ್ಲಿ ಬಂದವರು ಆಕ್ರೋಶ ಹೊರ ಹಾಕಿ, ದೆಹಲಿಯಿಂದ ಬರುವಾಗಲೇ ಟ್ರೈನ್ ನಲ್ಲಿ ಕುಡಿಯೋಕೆ ನೀರಿಲ್ಲ. ಟಾಯ್ಲೆಟ್ನಲ್ಲಿ ನೀರು ಇರಲಿಲ್ಲ. ಇದೀಗ ಕ್ವಾರೆಂಟೈನ್ ಅಂತಿದ್ದಾರೆ. ದೆಹಲಿಯಿಂದ ಇಲ್ಲಿಗೆ ಬರುವ ತನಕ ಹಿಂಸೆಯಾಗಿದೆ. ಊಟ ತಿಂಡಿ ಬಗ್ಗೆ ಕೇಳಲೇಬೇಡಿ, ಕ್ವಾರೆಂಟೈನ್ ಮಾಡ್ತಾರೆ ಅಂತಾ ಗೊತ್ತೆ ಇರಲಿಲ್ಲ. ನಾವು ಬಡವರು ಹೋಟೆಲ್ಗೆ 1,800 ,2000 ಕೇಳ್ತಿದ್ದಾರೆ ಎಲ್ಲಿಂದ ತರುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ದೆಹಲಿಯಿಂದ ವಾಪಸಾದವರಲ್ಲಿ ಯುಪಿಎಸ್ಸಿ ವಿದ್ಯಾರ್ಥಿಗಳು ಇದ್ದು ಅವರು ಈ ಹಿಂದೆಯೇ ವೀಡಿಯೋ ಮಾಡಿ ವಾಪಸ್ ಕರೆಸಿಕೊಳ್ಳುವಂತೆ ಕೇಳಿಕೊಂಡಿದ್ದರು. ತುರ್ತಾಗಿ ಕೆಲಸಕ್ಕಾಗಿ ನಾವು ಬೆಂಗಳೂರಿಗೆ ಬಂದಿದ್ದೀವಿ ಹಾಗಾಗಿ ಕ್ವಾರಂಟೈನ್ನಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಇನ್ನೂ ನಮ್ಮ ಕಾಸು ಕೊಟ್ಟು ನಾವು ಕ್ವಾರೆಂಟೈನ್ ಯಾಕಾಗಬೇಕು? ನಾವು ಕ್ವಾರೆಂಟೈನ್ ಆಗೋದಿಲ್ಲ. ನೀವು ಕ್ವಾರೆಂಟೈನ್ ಮಾಡ್ತೀರಿ ಅಂದಿದ್ರೆ ನಾವು ಬರ್ತಾನೆ ಇರಲಿಲ್ಲ ಎಂದು ಅಧಿಕಾರಿಗಳ ಜೊತೆ ವಾಗ್ವಾದ ಮಾಡಿದ್ದಾರೆ. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು ಮನವೊಲಿಕೆ ಕಾರ್ಯ ಮಾಡಿದ್ದಾರೆ.