ಬೆಂಗಳೂರು : ಖಾಯಂ ನೌಕರರನ್ನಾಗಿ ಪರಿಗಣಿಸಬೇಕು ಎಂದು ಸಾರಿಗೆ ನೌಕರರು ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಿಂದಾಗಿ ಕೆಎಸ್‌ಆರ್‌ಟಿಸಿ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ನೌಕರರು ಮುಷ್ಕರವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಆದರೆ, ನಾಳೆಯೂ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇರಲ್ಲ. ಪ್ರಯಾಣಿಕರು ಬಸ್ ಇರುವುದಿಲ್ಲ ಎಂಬ ಗೊಂದಲಕ್ಕೆ ಒಳಗಾಗಬೇಡಿ ಎಂದು ಹೇಳಿದೆ.
ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ನೌಕರರು ತಮ್ಮನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿ ಇಂದು ನಗರದ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್ ರ್ಯಾಲಿ ನಡೆಸಿದರು.
ಎರಡು ಸಾವಿರಕ್ಕೂ ಅಧಿಕ ಕಾರ್ಮಿಕರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರ ಪತ್ನಿ, ಮಕ್ಕಳೂ ಈ ಹೋರಾಟದಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಜೆವರೆಗೂ ಫ್ರೀಡಂ ಪಾರ್ಕ್ನಲ್ಲೇ ಮುಂದುವರೆದ ಪ್ರತಿಭಟನೆಗೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ರೈತರೂ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ನಮ್ಮ ಬೇಡಿಕೆ ಈಡೇರಿಸುವವರೆಗೂ ಜೈಲಿಗೆ ಹೋಗಲು ಸಿದ್ಧ. ಸಂಜೆಯೊಳಗೆ ಸಂಬಂಧಪಟ್ಟ ಮಂತ್ರಿ ಸ್ಥಳಕ್ಕೆ ಬರದಿದ್ದರೆ, ನಾವೇ ಅವರಿರುವ ಜಾಗಕ್ಕೆ ಹೋಗುತ್ತೇವೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ್ದರು.
ಸಂಜೆಯಾದರೂ ಸಚಿವರೊಬ್ಬರೂ ಪ್ರತಿಭಟನಾ ಸ್ಥಳಕ್ಕೆ ಬರದ ಕಾರಣ ಆಕ್ರೋಶಗೊಂಡ ಪ್ರತಿಭಟನಾಕಾರರು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ದರಾದಾಗ ಪೊಲೀಸರು ವಶಕ್ಕೆ ಪಡೆದರು.