ಬೆಂಗಳೂರು : ಸಾರಿಗೆ ನೌಕರರನ್ನು ಸರ್ಕಾರಿ ಖಾಯಂ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಿನ್ನೆ ನೌಕರರು ಕೆಲಸಕ್ಕೆ ಹಾಜರಾಗಿರಲಿಲ್ಲ. ದಿನವಿಡೀ ಬಸ್‌ಗಳು ನಿಂತಲ್ಲೇ ನಿಂತಿದ್ದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಇಂದೂ ಕೂಡ ಪಟ್ಟು ಬಿಡದೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಸಾರಿಗೆ ಚಾಲಕರು - ನಿರ್ವಾಹಕರು ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ಕೊರೊನಾ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗೆ ಬದ್ಧರಾಗಿದ್ದೇವೆ: ಸಾರಿಗೆ ಸಚಿವ ಸವದಿ
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಬಸ್ ಸಿಗದೆ ಜನ ಪರದಾಟ ನಡೆಸುವ ಸ್ಥಿತಿ ಉಂಟಾಗಿದೆ. ನಿನ್ನೆ ಸಮಸ್ಯೆ ಬಗೆಹರಿಸಲು ಸರ್ಕಾರ ವಿಫಲವಾದ ಕಾರಣ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಿದ್ದಾರೆ.
ಮುಷ್ಕರ ಮುಂದುವರಿಕೆ ಹಿನ್ನೆಲೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಖಾಸಗಿ ಚಾಲಕ-ನಿರ್ವಾಹಕರ ಮೂಲಕ ಬಸ್ ಸಂಚಾರ ನಡೆಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: ಮುಂದುವರೆದ ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ ಬಿಎಂಟಿಸಿ ಬಸ್
ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನೆಲೆ ಸರ್ಕಾರ ಈ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಇಂದು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ರೆ ಖಾಸಗಿ ಚಾಲಕರ ಮೂಲಕ ಬಸ್ ಓಡಿಸಲು ಪ್ಲಾನ್ ಮಾಡಿದ್ದು, ಇಂದು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ಸರ್ಕಾರ ಡೆಡ್ಲೈನ್ ನೀಡಿದೆ. ಕರ್ತವ್ಯಕ್ಕೆ ಹಾಜರಾಗದಿದ್ರೆ ಎಸ್ಮಾ ಜಾರಿ ಮಾಡುವ ಎಚ್ಚರಿಕೆಯನ್ನು ನೀಡಿದೆ.