ಬೆಂಗಳೂರು : ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 15-20 ರಷ್ಟು ಹೆಚ್ಚಳವಾಗಿರುವುದರಿಂದ ನಾಲ್ಕು ಸಾರಿಗೆ ನಿಗಮಗಳ ಆದಾಯದಲ್ಲಿಯೂ ಹೆಚ್ಚಳವಾಗಿದೆ. ಹಾಗಾಗಿ ಸದ್ಯದ ಮಟ್ಟಿಗೆ ಬಸ್ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾಪದಿಂದ ಸಾರಿಗೆ ನಿಗಮಗಳು ದೂರ ಸರಿದಿವೆ. ಉಚಿತ ಟಿಕೆಟ್ ದರದ ಮೊತ್ತ ರೀ ಎಂಬರ್ಸ್ ಮೆಂಟ್ ಸರಿಯಾಗಿ ಮಾಡಿದಲ್ಲಿ ಸಾರಿಗೆ ನಿಗಮಗಳ ನಿರ್ವಹಣೆಗೆ ಯಾವುದೇ ತೊಂದರೆ ಆಗಲ್ಲ. ಟಿಕೆಟ್ ದರ ಪರಿಷ್ಕರಣೆ ಪ್ರಸ್ತಾಪದ ಪ್ರಮೇಯವೂ ಎದುರಾಗಲ್ಲ ಎನ್ನುವ ಲೆಕ್ಕಾಚಾರದಲ್ಲಿ ಸಾರಿಗೆ ನಿಗಮಗಳಿವೆ.
ಕೋವಿಡ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಿಗೆ ಶಕ್ತಿ ಯೋಜನೆ ಆರ್ಥಿಕ ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಿದೆ. ನಾಲ್ಕೂ ನಿಗಮಗಳಲ್ಲಿ ಶಕ್ತಿ ಯೋಜನೆ ಪರಿಣಾಮವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.15-20 ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಸಾರಿಗೆ ನಿಗಮಗಳು ಆದಾಯ ವೃದ್ಧಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ಯಾವುದೇ ಸಾರಿಗೆ ನಿಗಮ ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾಪಕ್ಕೆ ಮುಂದಾಗಿಲ್ಲ. ಹೊಸ ಬಸ್ಗಳ ಖರೀದಿ, ಹಳೆ ಬಸ್ಗಳ ದುರಸ್ತಿ ಕಾರ್ಯ ನಡೆದಿದ್ದರೂ ಬಸ್ ಟಿಕೆಟ್ ದರ ಪರಿಷ್ಕರಣೆ ಕುರಿತು ಸಾರಿಗೆ ನಿಗಮಗಳು ಯಾವುದೇ ಆಲೋಚನೆ ಮಾಡಿಲ್ಲ. ಹಾಗಾಗಿ ಶಕ್ತಿ ಯೋಜನೆಯ ಕಾರಣದಿಂದಾಗಿ ಸದ್ಯದ ಮಟ್ಟಿಗೆ ಬಸ್ ಪ್ರಯಾಣ ದರದಲ್ಲಿ ಹೆಚ್ಚಳ ಇಲ್ಲವಾಗಿದೆ.
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆ ಜಾರಿಯಾದ ನಂತರ ನಮ್ಮ ಸಾರಿಗೆ ನಿಗಮಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ರೀ ಎಂಬರ್ಸ್ ಮೆಂಟ್ನಲ್ಲಿ ಅಷ್ಟು ಹಣ ಕೊಟ್ಟರೆ ನಮಗೆ ಇನ್ನಷ್ಟು ಉತ್ತಮವಾಗಿ ಸೇವೆ ನೀಡಲು ಸಾಧ್ಯವಾಗಲಿದೆ. ಹೊಸ ಬಸ್ ಖರೀದಿ ಮಾಡಬಹುದು ಎಂದರು.
ಸದ್ಯ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ಎಲ್ಲದರ ಬೆಲೆ ಏರಿಕೆಯಾದರೂ ನಾವು ಟಿಕೆಟ್ ದರ ಹೆಚ್ಚಿಸಿಲ್ಲ. 2013 ಮತ್ತು 2015ರಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಅಂದು ಡೀಸೆಲ್ ದರ, ವೇತನ, ಟೈರ್ ಟೂಬ್ ಬಿಡಿಭಾಗ ಎಷ್ಟಿತ್ತೋ ಅದರಲ್ಲೆಲ್ಲಾ ಈಗ ಹೆಚ್ಚಳವಾಗಿದೆ. ಆದರೂ ಬಸ್ ಪ್ರಯಾಣ ದರ ಹೆಚ್ಚಿಸಿಲ್ಲ. ಆದರೆ, 2020 ರಲ್ಲಿ ಕೆಎಸ್ಆರ್ಟಿಸಿ ಒಂದು ನಿಗಮ ಮಾತ್ರ ದರ ಹೆಚ್ಚಿಸಿತ್ತು. ಆ ನಿಗಮವೂ ಕಳೆದ ಮೂರು ವರ್ಷದಿಂದ ಟಿಕೆಟ್ ದರ ಹೆಚ್ಚಿಸಿಲ್ಲ. ಹಾಗಂತ ಬೆಲೆ ಹೆಚ್ಚಿಸಬೇಕು ಎಂದು ನಾನು ಹೇಳಲ್ಲ. ಸರ್ಕಾರ ಸಹಕಾರ ನೀಡಬೇಕು ಎಂದು ಹೇಳುತ್ತಿದ್ದಾರೆ. ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಆದರೆ ನಮಗೆ ಸರ್ಕಾರ ಸಪೋರ್ಟ್ ಮಾಡಬೇಕು ಎಂದರು.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟ ಪರಿಹಾರಕ್ಕಾಗಿ ಸಲಹೆ ನೀಡಲು ರಚಿಸಲಾಗಿದ್ದ ಶ್ರೀನಿವಾಸಮೂರ್ತಿ ಸಮಿತಿ ವರದಿಯನ್ನು ಸರ್ಕಾರದಿಂದ ಸ್ವೀಕರಿಸಲಾಗಿದೆ. ಆದರೆ, ಯಾವುದು ಅನುಷ್ಠಾನ ಮಾಡಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಅವರು ಶಿಫಾರಸು ಮಾಡಿದ್ದಾರೆ, 70-80 ಸಲಹೆ ಕೊಟ್ಟಿದ್ದಾರೆ. ಅದರಲ್ಲಿ ಅಗತ್ಯ ಹಾಗೂ ಕಾರ್ಯಸಾಧು ಎನ್ನುವಂತಹ ಶಿಫಾರಸುಗಳನ್ನು ಮಾತ್ರ ಅಳವಡಿಸಿಕೊಳ್ಳುತ್ತೇವೆ ಎಂದರು.
ಸದ್ಯ ಶ್ರೀನಿವಾಸಮೂರ್ತಿ ಸಮಿತಿಯನ್ನು ರದ್ದು ಮಾಡಿಲ್ಲ. ಬೇಕಾದಾಗ ಬಳಸಿಕೊಳ್ಳಲಾಗುತ್ತದೆ. ಸಮಿತಿಯಿಂದ ನಿಗಮಕ್ಕೆ ಹೊರೆ ಇಲ್ಲ. ಅದರಲ್ಲಿ ಹೆಚ್ಚಿನ ಜನ ಇಲ್ಲ. ನಾಲ್ಕು ಸಂಸ್ಥೆಗಳಿಗೆ ಒಳ್ಳೆಯದಾಗಲಿ ಎಂದು ಆರು ತಿಂಗಳ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ದೂರದೃಷ್ಟಿ ಇಟ್ಟುಕೊಂಡು ವರದಿ ಕೊಟ್ಟಿದ್ದಾರೆ. ಟಿಕೆಟ್ ದರ ಹೆಚ್ಚಳ, ಕಂಡಕ್ಟರ್ ಕಮ್ ಡ್ರೈವರ್ ಮಾತ್ರ ಇರಲಿ. ಹಲವು ಡಿಪೋ ಖಾಸಗೀಕರಣ ಮಾಡಿ, ನಾಲ್ಕೂ ನಿಗಮಗಳನ್ನು ಮರ್ಜ್ ಮಾಡಿ ಎನ್ನುವ ಸಲಹೆ ನೀಡಿದ್ದಾರೆ. ಆದರೆ ನಿಗಮಗಳಿಗೆ ಹೊರೆಯಾಗುವ ಶಿಫಾರಸುಗಳನ್ನು ನಾವು ಜಾರಿ ಮಾಡಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: Free bus scheme: NWKRTC ಬಸ್ಗಳಲ್ಲಿ 3 ಕೋಟಿಗೂ ಹೆಚ್ಚು ಮಹಿಳೆಯರ ಪ್ರಯಾಣ, ಉಚಿತ ಟಿಕೆಟ್ ಮೌಲ್ಯ 80 ಕೋಟಿ ರೂಪಾಯಿ