ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಂಗಳಮುಖಿ ವಿಜಯಾ ಕೊಲೆ ಪ್ರಕರಣ ಬೇಧಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ತಿಂಗಳ 17ನೇ ತಾರೀಖು ಸಂಜೆ 5ಗಂಟೆ ಸುಮಾರಿಗೆ ಸುಬ್ರಮಣ್ಯಪುರದ ಏರಿಯಾವೊಂದರಲ್ಲಿ ಮಂಗಳಮುಖಿ ವಿಜಯಾ ಜೊತೆ ಕಿರಿಕ್ ತೆಗೆದು ಕಿತ್ತಾಡಿಕೊಂಡಿದ್ದರು. ಗಲಾಟೆಯಾದಾಗ ಕೋಪಗೊಂಡ ಅರುಣ್, ಮೃತ ವಿಜಯಾ ಕುತ್ತಿಗೆಗೆ ಆಯುಧದಿಂದ ಇರಿದಿದ್ದನು. ಪರಿಣಾಮ ತೀವ್ರವಾಗಿ ಗಾಯಗೊಂಡ ಈಕೆಯನ್ನು ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದ್ದರು. ಆದರೆ ಮಾರ್ಗ ಮಧ್ಯೆ ಆಕೆ ಅಸುನೀಗಿದ್ದರಿಂದ ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದರು.
ತನಿಖೆಗೆ ಮುಂದಾದ ಪೊಲೀಸರಿಗೆ ಅಸಲಿಗೆ ಕೊಲೆಯಾದ ಮಂಗಳಮುಖಿ ವಿಜಯಾ ಕಾಟನ್ ಪೇಟೆ ನಿವಾಸಿ ಎಂದು ತಿಳಿದು ಬಂದಿದೆ. ಆದರೆ ಅದಕ್ಕೂ ಮೊದಲು ಸುಬ್ರಮಣ್ಯಪುರದಲ್ಲಿ ವಾಸವಿದ್ದಳು. ಈ ವೇಳೆ ಅನು ಎಂಬ ಹಿರಿಯ ಮಂಗಳಮುಖಿಯ ಕೈಕೆಳಗಿದ್ದ ಆಕೆ ತನ್ನ ಭಿಕ್ಷಾಟನೆಯ ಹಫ್ತಾ ನೀಡಬೇಕಿತ್ತು. ಅದು ತಿಂಗಳಿಗೆ ಇಂತಿಷ್ಟು ಅಂತ ಅನುಗೆ ಕಳುಹಿಸಿ ಕೊಡಬೇಕಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆ ಆಕೆಯಿಂದ ದೂರಾದ ವಿಜಯಾ ಕಾಟನ್ ಪೇಟೆಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದಳು.
ಇದೇ ತಿಂಗಳ 17ರಂದು ಏರಿಯಾಗೆ ಬಂದಿದ್ದ ವಿಜಯಾ, ಅನು ಮನೆ ಬಳಿ ತೆರಳಿದ್ದಳು. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಆಗ ಮಂಗಳಮುಖಿ ಅನು ಪತಿಯಾದ ಅರುಣ್ ಹಣಕೊಡುವಂತೆ ಪೀಡಿಸುವ ತರಾತುರಿಯಲ್ಲಿ ಆಕೆಯ ಕುತ್ತಿಗೆಗೆ ಚಾಕು ಇಟ್ಟು ಹತ್ಯೆ ಮಾಡಿದ್ದಾನೆ.
ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯಪುರ ಪೊಲೀಸರು ಕೃತ್ಯ ಎಸಗಿದ್ದ ಅರುಣ್ ಹಾಗೂ ಆತನ ಸಹಚರ ಶಿವುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಘಟನೆಗೆ ಪ್ರಮುಖ ಕಾರಣವಾದ ಮಂಗಳಮುಖಿ ಅನು ಬಂಧನಕ್ಕೆ ಮುಂದಾಗಿದ್ದು, ಸದ್ಯ ಆಕೆ ನಾಪತ್ತೆಯಾಗಿದ್ದಾಳೆ.