ಬೆಂಗಳೂರು: ಹಾವೇರಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಬೇಕು. ಆಗ ಮಾತ್ರ ಅಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.
ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, ಜಾನಪದ ವಿಶ್ವವಿದ್ಯಾಲಯ ನನ್ನ ಕಾಲದಲ್ಲಿಯೇ ಪ್ರಾರಂಭ ಆಗಿದ್ದು, ಕರ್ನಾಟಕದ ಮಧ್ಯಭಾಗದಲ್ಲಿ ಇರಬೇಕು ಎಂದು ಹಾವೇರಿಯಲ್ಲಿ ಜಾನಪದ ವಿವಿಯನ್ನು ಪ್ರಾರಂಭಿಸಲಾಯ್ತು. ಕೆಲವರ ತಲೆಯಲ್ಲಿ ಏನಿತ್ತು ಅಂದ್ರೆ ವಿಶ್ವವಿದ್ಯಾಲಯ ಎಂದು ಬಂದುಬಿಟ್ಟರೆ ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ ಬರಲಿ ಅಂತಾರೆ. ವಿಶ್ವವಿದ್ಯಾಲಯ ಎಲ್ಲ ನನ್ನಿಂದನೇ ಪ್ರಾರಂಭ ಆಯ್ತು. ಆದರೆ, ಆದೇಶ ಕೊಡುವಾಗ ಉನ್ನತ ಶಿಕ್ಷಣ ಇಲಾಖೆಯಲ್ಲಿರಲಿ ಅಂತಾ ಹೇಳಿ ಅಲ್ಲಿಗೆ ಸೇರಿಸಿಬಿಟ್ಟರು. ಆದ್ದರಿಂದ ಜಾನಪದ ವಿವಿಯ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ಹೇಳಿದರು.
ಈ ಜನಪದ ಕಲಾವಿದರು, ಕವಿಗಳು, ಸಾಹಿತಿಗಳು ಎಲ್ಲ ಕೆಳವರ್ಗದಿಂದ ಬಂದಿರುವವರು. ಕೆಳವರ್ಗದವರ ಬದುಕೇ ಜನಪದ ಕಲೆ ಆಗಿದೆ. ಆದ್ದರಿಂದ ನನ್ನ ಬಲಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಿದ್ದಾರೆ. ನನ್ನ ಎಡಭಾಗದಲ್ಲಿ ಉನ್ನತ ಶಿಕ್ಷಣ ಸಚಿವರಿದ್ದಾರೆ. ಇಬ್ಬರು ಕುಳಿತು ಮಾತನಾಡಿ ಜಾನಪದ ವಿವಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿ ಎಂದು ಮನವಿ ಮಾಡಿದರು.
ಜಾನಪದ ವಿವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿದರೆ ಮಾತ್ರ ಅಲ್ಲಿ ಚಟುವಟಿಕೆ ನಡೆಯುತ್ತವೆ. ಜಾಗ ಕೊಟ್ಟಿದ್ದೀವಿ, ಹಣ ಕೊಟ್ಟಿದ್ದೀವಿ, ಕಟ್ಟಡ ಕಟ್ಟಿದ್ದೀವಿ, ಮುಗಿದು ಹೋಯ್ತು ಅಲ್ಲಿಗೆ ವ್ಯವಸ್ಥಿತವಾಗಿ ನಿಂತೋಯ್ತು. ಆದ್ದರಿಂದ ಅಲ್ಲಿಗೆ ನೇಮಕಾತಿ ಮಾಡುವಾಗಲೂ ಕೂಡ ಅರ್ಹತೆ ಇರುವ ಜನಪದ ಕಲಾವಿದರನ್ನೇ ನೇಮಕ ಮಾಡಿ. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ನಾನು ಕೂಡ ವಿವಿಗೆ ಹೋಗಿಬಂದಿದ್ದೇನೆ. ಆದ್ದರಿಂದ ಸಚಿವರು ಇದನ್ನು ಪರಿಶೀಲಿಸಬೇಕು. ಆಗ ಮಾತ್ರ ಜನಪದ ವಿವಿಯ ಚಟುವಟಿಕೆಗಳು ನಡೆಯುತ್ತವೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಒತ್ತುವರಿ ಆಗದಂತೆ ತನಿಖಾ ಆಯೋಗ ರಚನೆ.. ಮಳೆ ನಿರ್ವಹಣೆಗೆ ಕಾರ್ಯಪಡೆ ರಚನೆ