ಬೆಂಗಳೂರು: ಕಾನೂನುಗಳ ಹಾಗೂ ಶಾಸನಾತ್ಮಕ ನಿಯಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸುವ ರಿಟ್ ಅರ್ಜಿಗಳನ್ನು ಏಕಸದಸ್ಯ ಪೀಠದ ಬದಲು ವಿಭಾಗೀಯ ಪೀಠದ ಎದುರು ವಿಚಾರಣೆಗೆ ನಿಗದಿಪಡಿಸುವಂತೆ ಹೊರಡಿಸಿರುವ ಅಧಿಸೂಚನೆಯನ್ನು ಕೈಬಿಡಲು ಕೋರಿ ಬೆಂಗಳೂರು ವಕೀಲರ ಸಂಘ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ.
ಈ ಕುರಿತು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ಹೈಕೋರ್ಟ್ ಹೊರಡಿಸಿರುವ ಅಧಿಸೂಚನೆ ಹೊರಡಿಸಿದ ರೀತಿ ವಕೀಲ ಸಮುದಾಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಧಿಸೂಚನೆ ಹೊರಡಿಸಿರುವ ನಿರ್ಧಾರ ತಪ್ಪಾಗಿದ್ದು, ನ್ಯಾಯದಾನದ ದೃಷ್ಟಿಯಿಂದಾಗಲೀ, ವಕೀಲ ಸಮುದಾಯದ ಹಿತಾಸಕ್ತಿಗಾಗಲೀ ಪೂರಕವಾಗಿಲ್ಲ ಎಂಬ ಅಭಿಪ್ರಾಯ ವಕೀಲ ಸಮುದಾಯದಲ್ಲಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಆನ್ಲೈನ್ ಗೇಮ್ ನಿಷೇಧಿಸಿರುವ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಯಲ್ಲಿ ಉನ್ನತ ಕಾನೂನು ಪಂಡಿತರು ವಾದಿಸುತ್ತಿದ್ದಾರೆ. ಅರ್ಜಿ ಏಕಸದಸ್ಯ ಪೀಠದಲ್ಲಿ ವಿಚಾರಣೆಗೆ ಬಾಕಿ ಇದ್ದಾಗಲೇ ಅಧಿಸೂಚನೆ ಹೊರಡಿಸಿರುವುದು ವಕೀಲ ಸಮುದಾಯಕ್ಕೆ ಸರಿ ಕಾಣುತ್ತಿಲ್ಲ ಎಂದು ಸಂಘ ಅಧಿಸೂಚನೆ ಕುರಿತು ಆಕ್ಷೇಪಿಸಿದೆ. ಅಲ್ಲದೇ, ಆಡಳಿತಾತ್ಮಕ ನಿರ್ಧಾರದಂತೆ ಹೊರಡಿಸಿರುವ ಅಧಿಸೂಚನೆಯು ಹಲವು ಕಾನೂನು ಪ್ರಶ್ನೆಗಳನ್ನು ಸೃಷ್ಟಿಸಿದೆ ಎಂದಿರುವ ಸಂಘ ಪತ್ರದಲ್ಲಿ 5 ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ.
ಇದನ್ನೂ ಓದಿ: ಪುತ್ರನಿಗೆ ಕಾಂಗ್ರೆಸ್ ಟಿಕೆಟ್: ಎ.ಮಂಜು ಅವರಿಗೆ ಗೇಟ್‌ಪಾಸ್ ನೀಡಿದ ಬಿಜೆಪಿ
ಏಕ ಸದಸ್ಯ ಪೀಠ 'ಅರೆ ವಿಚಾರಣೆಗೆ ಒಳಗಾದ ಪ್ರಕರಣ ಎಂದು ಆದೇಶಿಸಿರುವಾಗ ಮುಖ್ಯ ನ್ಯಾಯಮೂರ್ತಿಗಳು ಆಡಳಿತಾತ್ಮಕ ಆದೇಶದ ಮೂಲಕ ವಿಭಾಗೀಯ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಬಹುದೇ? ಕರ್ನಾಟಕ ಹೈಕೋರ್ಟ್ ಕಾಯ್ದೆ ಅಡಿಯಲ್ಲಿ ಶಾಸನಬದ್ಧವಾಗಿ ನೀಡಿರುವ ಮೇಲ್ಮನವಿ ಹಕ್ಕನ್ನು ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಆದೇಶದ ಮೂಲಕ ತೆಗೆಯಬಹುದೇ? ಸಂವಿಧಾನದ 226ನೇ ವಿಧಿ ಮೂಲಕ ಏಕ ಸದಸ್ಯ ಪೀಠಕ್ಕೆ ನೀಡಿರುವ ಮೂಲ ರಿಟ್ ಅಧಿಕಾರವನ್ನು ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಆದೇಶದ ಮೂಲಕ ತೆಗೆದುಹಾಕಬಹುದೇ? ಇಂತಹ ಮಹತ್ವದ ನಿರ್ಧಾರವನ್ನು ಹೈಕೋರ್ಟ್‌ನ (ಫುಲ್ ಕೋರ್ಟ್) ಮುಂದೆ ತರಲಿಲ್ಲವೇಕೆ? ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿರುವಂತಹ ಸೂಕ್ಷ್ಮ ಪ್ರಕರಣವನ್ನು ಏಕ ಸದಸ್ಯ ಪೀಠ ವಿಚಾರಣೆ ನಡೆಸುತ್ತಿರುವಾಗ ಮತ್ತು ದೇಶದ ಹಿರಿಯ ವಕೀಲರು ವಾದ ಮಂಡಿಸುತ್ತಿರುವಾಗ ಅದನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆಗೆ ಕೈಗೆತ್ತಿಕೊಳ್ಳವುದು ಸರಿಯೇ? ಎಂದು ಸಂಘ ಪ್ರಶ್ನಿಸಿದೆ.
ಅಲ್ಲದೇ, ನ್ಯಾಯದಾನ ವ್ಯವಸ್ಥೆಯ ಭಾಗವಾಗಿರುವ ವಕೀಲ ಸಮುದಾಯ ಹೈಕೋರ್ಟ್ ನಂತ ಶ್ರೇಷ್ಠ ಸಂಸ್ಥೆಗಳು ಹಾನಿಯಾಗದಂತೆ ನೋಡಿಕೊಳ್ಳುವ ಕರ್ತವ್ಯ ಹೊಂದಿವೆ. ಹೀಗಾಗಿ, ಅನಗತ್ಯ ಚರ್ಚೆಗೆ ಕಾರಣವಾಗಿರುವ ಅಧಿಸೂಚನೆಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ತಕ್ಷಣವೇ ಹಿಂಪಡೆಯಬೇಕು ಎಂದು ಸಂಘ ಕೋರಿದೆ.
ಅಧಿಸೂಚನೆ ಪ್ರಕಟಿಸಿದ ಹೈಕೋರ್ಟ್:
ಎಎಪಿ ಪತ್ರ ಬರೆದ ಬೆನ್ನಲ್ಲೇ ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಇಂದು ಅಧಿಸೂಚನೆ ಹೊರಡಿಸಿ, ಅದನ್ನು ಹೈಕೋರ್ಟ್ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ. ಅಧಿಸೂಚನೆಯಲ್ಲಿ, ಕಾಯ್ದೆ ಮತ್ತು ಶಾಸನಾತ್ಮಕ ನಿಯಮಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸುವ ಎಲ್ಲ ರಿಟ್ ಅರ್ಜಿಗಳು ವಿಭಾಗೀಯ ಪೀಠದ ಮುಂದೆಯೇ ವಿಚಾರಣೆಗೆ ನಿಗದಿಯಾಗಬೇಕು ಎಂದು ತಿಳಿಸಲಾಗಿದೆ. ಬೆಂಗಳೂರು ಪ್ರಧಾನ ಪೀಠವೂ ಸೇರಿದಂತೆ ಕಲಬುರಗಿ ಮತ್ತು ಧಾರವಾಡ ಪೀಠಗಳಲ್ಲೂ ವಿಭಾಗೀಯ ಪೀಠಗಳೇ ಇಂತಹ ಅರ್ಜಿಗಳನ್ನು ವಿಚಾರಣೆ ನಡೆಸಬೇಕು ಎಂದು ಸೂಚಿಸಲಾಗಿದೆ.