ಬೆಂಗಳೂರು: ಆಸ್ತಿ ನೋಂದಣಿಯಾದ ನಂತರ ಬಂದ ಹಣವು ಖಾಸಗಿಯವರ ಖಾತೆಗೆ ವರ್ಗಾವಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಂದಣಿ ಮಹಾನಿರೀಕ್ಷಕರ ಮತ್ತು ಮುದ್ರಾಂಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ಪಡೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು ಶೃಂಗೇರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಡೆದ ಅವ್ಯವಹಾರ ಕುರಿತು ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸಿದರು.
ಖರೀದಿದಾರರೊಬ್ಬರು ಆಸ್ತಿ ನೋಂದಣಿ ಸಂಬಂಧ 5.32 ಲಕ್ಷ ರೂ. ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ. ಇದು ಖಜಾನೆ ತಂತ್ರಾಂಶದಲ್ಲಿಯೂ ಪಾವತಿ ಎಂದು ಮಾಹಿತಿ ಬಂದಿದೆ ಎಂದರು. ಆದರೆ ಬ್ಯಾಂಕ್‌ನಿಂದಲೂ ಹಣ ಡ್ರಾ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಇದು ಹೇಗೆ ಸಾಧ್ಯ ಎಂಬುದು ಪ್ರಶ್ನೆಯಾಗಿದೆ. ಹೀಗಾಗಿ ನೋಂದಣಾಧಿಕಾರಿಗಳ ಕಚೇರಿಯಲ್ಲಿನ ಸಿಬ್ಬಂದಿ ವಿರುದ್ಧ ತನಿಖೆ ನಡೆಸಲಾಗುವುದು ಎಂದರು.
ನೋಂದಣಿ ಮಹಾನಿರೀಕ್ಷಕರ ಮತ್ತು ಮುದ್ರಾಂಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ರಾಜೇಗೌಡ, ಪ್ರಕರಣ ಕುರಿತು ಶೃಂಗೇರಿ ಉಪ ನೋಂದಣಾಧಿಕಾರಿ ಚೆಲುವರಾಜು, ಮುಖ್ಯ ಕಾರ್ಯದರ್ಶಿಗಳು, ಖಜಾನೆ ಆಯುಕ್ತರಿಗೆ ಮತ್ತು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.