ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರು ಪಟ್ಟು ಹಿಡಿದು ಕುಳಿತಿದ್ದು ಆರನೇ ವೇತನ ಆಯೋಗ ಜಾರಿ ಆಗಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು ಇತ್ತ ಸರ್ಕಾರ ಮಾತ್ರ ಜಗ್ಗದೆ ಮೌನವಾಗಿದೆ. 4 ದಿನಗಳು ಕಳೆದರೂ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ವಿಫಲವಾದ ಹಿನ್ನೆಲೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜ್ಯಾದ್ಯಂತ ರಸ್ತೆಗಿಳಿದು ಪ್ರತಿಭಟಿಸಲು ನೌಕರರು ಹಾಗೂ ಕುಟುಂಬಸ್ಥರು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ.
ನೌಕರರು ಹಾಗೂ ಅವರ ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿ ಮುಂದೆ ಖಾಲಿ ತಟ್ಟೆ ಲೋಟ ಬಡಿಯುವ ಮೂಲಕ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಡಿಪೋಗಳಲ್ಲಿ ಬಸ್ ನಿಲ್ಲಿಸಿ ಕೆಲಸಕ್ಕೆ ನೌಕರರು ಗೈರಾಗಿದ್ದಾರೆ.
ತೆಲಂಗಾಣ ಮಾದರಿಯಲ್ಲೇ ಹೋರಾಟ:
2019ರಲ್ಲಿ ತೆಲಂಗಾಣದಲ್ಲಿ ಬರೋಬ್ಬರಿ 52 ದಿನಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. 48 ಸಾವಿರ ನೌಕರರು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಹೋರಾಟ ಮಾಡಿದ್ದರು. ಆ ಸಂದರ್ಭದಲ್ಲಿ ಎಲ್ಲ ನೌಕರರನ್ನ ತೆಲಂಗಾಣ ಸರ್ಕಾರ ವಜಾ ಮಾಡಿತ್ತು. ಬಳಿಕ ನೌಕರರ ಮುಷ್ಕರಕ್ಕೆ ಮಣಿದು ಬೇಡಿಕೆ ಈಡೇರಿಸಿತ್ತು. ಇದೀಗ ರಾಜ್ಯದಲ್ಲಿ ತೆಲಂಗಾಣ ಮಾದರಿಯಲ್ಲೇ ಹೋರಾಟ ನಡೆಸಲು ಕರ್ನಾಟಕದ ಸಾರಿಗೆ ನೌಕರರು ಮುಂದಾಗಿದ್ದು, ಆರನೇ ವೇತನ ಆಯೋಗ ಜಾರಿಗೆ ಬಿಗಿಪಟ್ಟು ಹಿಡಿಯಲಿದ್ದಾರೆ.
ವೋಲ್ವೋ ಬಸ್ಗಳನ್ನ ರಸ್ತೆಗಿಳಿಸಿದ ಬಿಎಂಟಿಸಿ:
ಮೆಜೆಸ್ಟಿಕ್ ನಿಲ್ದಾಣಕ್ಕೆ ವೋಲ್ವೋ ಬಸ್ಸುಗಳು ಆಗಮಿಸಿದ್ದು, ಏರ್ಪೋರ್ಟ್ಗೆ ತೆರಳಲಿವೆ. ಈಗಾಗಲೇ 8 ವೋಲ್ವೋ ಬಸ್ಸುಗಳು ರಸ್ತೆಗಿಳಿದಿದ್ದು ಕಾರ್ಯಾಚರಣೆ ಆರಂಭವಾಗಿದೆ.
ರಾಜ್ಯಾದ್ಯಂತ ಇಂದು ಬೆಳಗ್ಗೆ 8 ಗಂಟೆಯಿಂದ ಕೆಎಸ್ಆರ್ಟಿಸಿಯಿಂದ 393 ಬಸ್ಸು, ಬಿಎಂಟಿಸಿ 95, ಎನ್ಇಕೆಎಸ್ಆರ್ಟಿಸಿ 249, ಎನ್ ಡಬ್ಲ್ಯೂಕೆಎಸ್ಆರ್ಟಿಸಿ 83 ಬಸ್ಸು ಸೇರಿ ಒಟ್ಟಾರೆ 820 ಬಸ್ಸುಗಳು ರಸ್ತೆಗಿಳಿದಿವೆ.