ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟೀಕರಣ ಹಾಗೂ ಭರವಸೆ ಕಡಿಮೆ ಇರುವುದು ಗಮನಕ್ಕೆ ಬಂದಿದೆ ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಅಭಿಪ್ರಾಯಪಟ್ಟರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆ ಪ್ರಜಾಪ್ರಭುತ್ವ ಪರೀಕ್ಷೆ. ಇದರಲ್ಲಿ ನಾವು ಅಧಿಕಾರಕ್ಕೆ ಬರುವ ಆಶೀರ್ವಾದ ಸಿಕ್ಕಿಲ್ಲ. ಆದರೂ ಶೇ 36 ರಷ್ಟು ಮತದಾರರು ಬೆಂಬಲ ನೀಡಿದ್ದಾರೆ. 66 ಶಾಸಕರನ್ನು ನೀಡಿದ್ದಾರೆ. ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಹಿಂದೆ ಜನಪರವಾಗಿ ಕೆಲಸ ಮಾಡಿದ್ದರೆ, ಗ್ಯಾರಂಟಿಗೆ ಬೆಂಬಲ ನೀಡುವ ಮೂಲಕ ಗೆಲ್ಲುವ ಸ್ಥಿತಿ ಇದೆ. ಕಾಂಗ್ರೆಸ್ ಗೆಲುವಿನಲ್ಲಿ ಗ್ಯಾರಂಟಿ ವಿಚಾರ ಗ್ಯಾರೆಂಟಿಯಾಗಿ ಕೆಲಸ ಮಾಡಿದೆ. ವೀರೇಂದ್ರ ಪಾಟೀಲ್ ಅವರ ನಂತರ ಈ ಬಾರಿ ವೀರಶೈವ ಲಿಂಗಾಯತ ಸಮುದಾಯದವರು ನಮ್ಮ ಕೈ ಹಿಡಿದಿದ್ದಾರೆ ಎಂದು ಪದೇ ಪದೆ ಹೇಳಲಾಗಿದೆ. ಯಾಕೆ ಮತದಾರರು ಬಿಟ್ಟು ಹೋಗಿದ್ದಾರೆ ಎಂಬುದಕ್ಕೆ ಉತ್ತರ ಕೊಡಲಿ.
ಹಿಂದೆಯೂ ಧರ್ಮ ಒಡೆಯಲು ಹೋಗಿ ಕಾಂಗ್ರೆಸ್ ಸಂಕಷ್ಟ ಅನುಭವಿಸಿತ್ತು. ರಾಮರಾಜ್ಯ ಹಾಗೂ ಗ್ರಾಮರಾಜ್ಯ ನಿರ್ಮಾಣದ ಬಗ್ಗೆ ಕಾಂಗ್ರೆಸ್ ನಿರ್ಲಕ್ಷ್ಯ ಯಾಕೆ? ಕಾಂಗ್ರೆಸ್ನವರು ಗಾಂಧೀಜಿಯವರನ್ನು ಮರೆತಿದ್ದೀರಿ. ನೆನಪಿಸಿಕೊಳ್ಳಿ. ಕುವೆಂಪು ಅವರನ್ನು ಪದೇ ಪದೆ ನೆನಪಿಸಿಕೊಂಡಿದ್ದು ಯಾಕೆ? ರಾಜಕೀಯ ಲಾಭಕ್ಕಾಗಿ ಇದನ್ನು ಮಾಡಿದ್ದಾ? ಡಿ.ಕೆ. ಶಿವಕುಮಾರ್ ಸಿಎಂ ರೇಸ್ನಲ್ಲಿ ಇದ್ದರು. ಆದರೆ ಅವರು ಉಪಮುಖ್ಯಮಂತ್ರಿ ಆದ ಹಿನ್ನೆಲೆ ಕುವೆಂಪು ನೆನಪಿಸಿಕೊಳ್ಳಲಾಗಿದೆಯೇ ಎಂದು ಕೇಳಿದರು.ಮಧ್ಯಪ್ರವೇಶಿಸಿದ ಯು.ಬಿ. ವೆಂಕಟೇಶ್, ಇಲ್ಲಾ ಡಿ.ಕೆ. ಶಿವಕುಮಾರ್ ಒಪ್ಪಿದ್ದಾರೆ. ಮುಂದೆ ಅವರೂ ಸಿಎಂ ಆಗುತ್ತಾರೆ. ಆತಂಕಬೇಡ ಎಂದರು.
ನಮ್ಮದು ಸಿಂಧು ಸಂಸ್ಕೃತಿ: ನಮ್ಮ ಧಾರ್ಮಿಕ ಆಚರಣೆಯನ್ನು ಮನೆಯ ಒಳಗೆ ಇಟ್ಟುಕೊಳ್ಳಬೇಕು. ಬಹಿರಂಗಪಡಿಸಬಾರದು. ಹಿಂದೆ ಪರಕೀಯರಿಂದ ನಮ್ಮ ಸಂಸ್ಕೃತಿ ಮೇಲೆ ದಾಳಿ ಆಗಿದೆ. ನಾವು ಇಲ್ಲಿನ ಮುಸ್ಲಿಂರ ವಿರೋಧಿಗಳಲ್ಲಾ. ಆದರೆ ಮೂರ್ತಿ ಪೂಜೆ ವಿರೋಧಿಸುವುದನ್ನು ಒಪ್ಪಲ್ಲ. ರಾಮನ ಮೌಲ್ಯಗಳು ನಮ್ಮವರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ರಾಜ್ಯಪಾಲರ ಭಾಷಣ ಮೇಲಿನ ಚರ್ಚೆ ಬೇರೆ ದಿಕ್ಕು ಪಡೆಯುತ್ತಿರುವುದಕ್ಕೆ ಆಡಳಿತ ಪಕ್ಷದಿಂದ ವಿರೋಧ ವ್ಯಕ್ತವಾಯಿತು.
75 ವರ್ಷವಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ಸಮಯದ ನಂತರವೂ ಬಡತನ ನಿವಾರಣೆ ಆಗಿಲ್ಲ ಅನ್ನುವುದು ಬೇಸರ. ದೇಶದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ಬಸ್ ನಲ್ಲಿ ಉಚಿತ ಪ್ರಯಾಣ ನೀಡಿದ್ದೀರಿ. ಸಂತೋಷ. ಇದನ್ನು ಪುರುಷರಿಗೂ ನೀಡಿ. ಗೃಹಲಕ್ಷ್ಮಿ ಹಿನ್ನೆಲೆ ಅತ್ತೆ ಸೊಸೆ ನಡುವೆ ಜಗಳ ಹಚ್ಚಿ ಹಾಕಿದ್ದೀರಿ ಎಂದು ಪ್ರಶ್ನಿಸಿದರು.ರಾಮಾಯಣದ ವಿಚಾರದ ಮೇಲೆ ಚರ್ಚೆ ಆಗಬೇಕು ಎಂದು ತೇಜಸ್ವಿನಿ ಹೇಳಿದರು.
ರಾಮಾಯಣದ ಎಲ್ಲಾ ವಿಚಾರ ಚರ್ಚೆ ಆಗಬೇಕು- ಜಾರಕಿಹೊಳಿ: ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ರಾಮಾಯಣದ ಎಲ್ಲಾ ವಿಚಾರ ಚರ್ಚೆ ಆಗಬೇಕು. ಏಕಲವ್ಯನ ಬೆರಳು ಕತ್ತರಿಸಿದ್ದು, ದಲಿತರಿಂದ ಸತ್ತ ಪ್ರಾಣಿ ಎಳೆಸುವ, ಮಲ ಹೊರುವ ಪದ್ಧತಿ ಸೇರಿದಂತೆ ಎಲ್ಲಾ ವಿಚಾರಗಳ ಚರ್ಚೆ ಆಗಬೇಕು. ಆಗ ಪರಿಪೂರ್ಣ ಚರ್ಚೆ ನಡೆಯಲು ಸಾಧ್ಯ ಎಂದರು.
ಪ್ರಕೃತಿ ವಿಕೋಪ ಹೆಚ್ಚಾಗಿದೆ. ಮುಂದಿನ ನಾಲ್ಕು ವರ್ಷ ಬರ ಬರಲಿದೆ ಎಂಬ ಸೂಚನೆ ಇದೆ. ಇದಕ್ಕಾಗಿ ಮೋದಿ ಸರ್ಕಾರ ಅಕ್ಕಿ ಕೊಡಲ್ಲಾ ಎಂದು ಆರೋಪಿಸುವುದು ಸರಿಯಲ್ಲ. ಐದು ಕೆಜಿ ಕೊಡುತ್ತೇವೆ, ಹೆಚ್ಚಿನದನ್ನು ಕೊಡಲ್ಲಾ ಎಂದು ಹೇಳಿದರು. ಇವರನ್ನು ದೋಷಿಯಾಗಿ ತೋರಿಸುವುದು ಸರಿಯಲ್ಲ. ಮೂಲಭೂತ ಸೌಲಭ್ಯ ಇನ್ನೂ ಎಲ್ಲರಿಗೂ ಸಿಕ್ಕಿಲ್ಲ. ಈಗ ಚರ್ಚೆ ಮಾಡುವುದು ಎಷ್ಟು ಸರಿ? ಬಡತನ ರೇಖೆ ಕೆಳಗೆ ಜನ ಎಷ್ಟು ದಿನ ಇರಬೇಕು? ಆಹಾರ ಭದ್ರತೆ ಕಾಯ್ದೆ ತರಬೇಕಾದ ಸ್ಥಿತಿ ಇರುವುದು ದುರಂತ ಎಂದು ತಿಳಿಸಿದರು.
ಇದನ್ನೂಓದಿ:ಧರಣಿ ಹಿಂಪಡೆದ ಬಿಜೆಪಿ; ಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಆರಂಭ