ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ವಲ್ಪ ಮಳೆ ಬಂದರೂ ಸಾಕು ರಸ್ತೆಯಲ್ಲಿ ಗುಂಡಿ ಬೀಳೋದು, ಮರ ಮುರಿದು ಬೀಳುವುದರ ಜೊತೆಗೆ ರಾಜಕಾಲುವೆಯಲ್ಲಿ ಕಸ ತುಂಬಿ ರಸ್ತೆಗಳಲ್ಲಿ ನೀರು ನಿಲ್ಲುತ್ತದೆ. ಹೀಗಾಗಿ ನಗರ ಟ್ರಾಫಿಕ್ ಆಯುಕ್ತ ರವಿಕಾಂತೇಗೌಡರ ತಂಡ ಸರ್ಕಾರ ಹಾಗೂ ಬಿಬಿಎಂಪಿಗೆ ಮಳೆಗಾಲಕ್ಕೆ ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಲ್ಲಿಕೆ ಮಾಡಿದೆ.
ಹಾಗೆಯೇ ವರದಿಯಲ್ಲಿ ಏನೆಲ್ಲಾ ಉಲ್ಲೇಖ ಮಾಡಿದ್ದಾರೆ ಅನ್ನೋದರ ಬಗ್ಗೆ ಈಟಿವಿ ಭಾರತ್ಗೆ ಅಧಿಕಾರಿಯೊಬ್ಬರು ಫೋನ್ ಮುಖಾಂತರ ಮಾಹಿತಿ ನೀಡಿದ್ದು, ಸದ್ಯ ಮುಂಗಾರು ಮಳೆ ಶುರುವಾಗಿದೆ. ಹೀಗಾಗಿ ನಗರದ ರಸ್ತೆಗಳಲ್ಲಿ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಹಾಗೂ ಅಪಾಯಕಾರಿ ರೀತಿಯಲ್ಲಿ ಬೆಳೆದು ನಿಂತಿರುವ ಮರಗಿಡಗಳನ್ನು ಮತ್ತು ರೆಂಬೆ ಕೊಂಬೆಗಳನ್ನು ತೆರವುಗೊಳಿಸುವುದು ಪಾಲಿಕೆಯ ಕರ್ತವ್ಯ ಆಗಿರುತ್ತದೆ ಎಂದಿದ್ದಾರೆ.
ಹೀಗಾಗಿ ಸದ್ಯ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ರಸ್ತೆಗಳ ಗುಂಡಿಗಳನ್ನ ಸರಿಪಡಿಸುವುದು, ಸುಗಮ ಸಂಚಾರಕ್ಕೆ ಅಡಚಣೆಯಾಗಿರುವ ಕೊಂಬೆ ಕಟ್ ಮಾಡುವುದು, ಮಳೆಗೆ ರಸ್ತೆ ಸಿಗ್ನಲ್ ಲೈಟ್ ಗೋಚರವಾಗುವುದಕ್ಕೆ ಡಾಂಬರ್ ಕಿತ್ತಿರುವ ರಸ್ತೆಗಳಿಗೆ ಡಾಂಬರೀಕರಣ, ಚರಂಡಿಗಳಲ್ಲಿ ನೀರು ಸುಗಮವಾಗಿ ಹರಿದು ಹೋಗುವಂತೆ ಕಸ ಕಡ್ಡಿ ತೆರವು, ಅಂಡರ್ ಪಾಸ್ಗಳಲ್ಲಿ ಮಳೆ ನೀರು ನಿಂತು ಸುಗಮ ಸಂಚಾರಕ್ಕೆ ಅಡಚಣೆ ತಪ್ಪಿಸುವುದು, ಫ್ಲೈ ಓವರ್ಗಳ ಮೇಲೆ ಸಹ ನೀರು ನಿಲುಗಡೆಯಾಗದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಮಾತನಾಡಲಾಗಿದೆ ಎಂದು ತಿಳಿಸಿದ್ದಾರೆ.
ಹೇಗೆಲ್ಲಾ ಸಮಸ್ಯೆಯಾಗ್ತಿದೆ?
ಮಳೆ ಬಂದರೆ ಸಾಕು ಒಳಚರಂಡಿ ಕಾಮಗಾರಿಯಲ್ಲಿ ಕಸ ಕಡ್ಡಿ ನಿಂತು ಮ್ಯಾನ್ ಹೋಲ್ಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಸದ್ಯ ನಗರದ ಮ್ಯಾನ್ ಹೋಲ್ ಪಟ್ಟಿಯನ್ನ ಟ್ರಾಫಿಕ್ ಪೊಲೀಸರು ಈ ರೀತಿ ಗುರುತಿಸಿದ್ದಾರೆ.
ಮ್ಯಾನ್ ಹೋಲ್ ಸ್ಥಳಗಳ ವಿವರ: ಉಪ್ಪಾರ ಪೇಟೆ ಸಂಚಾರ ಠಾಣಾ ವ್ಯಾಪ್ತಿ: 3, ಚಿಕ್ಕಪೇಟೆಸಂಚಾರ ಪೊಲೀಸ್ ಠಾಣೆ: 04, ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆ: 01, ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ: 02, ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸ್ ಠಾಣೆ: 02, ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ: 09, ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆ: 02, ಯಶವಂತಪುರ ಸಂಚಾರಿ ಪೊಲೀಸ್ ಠಾಣೆ: 05, ಪೀಣ್ಯ ಸಂಚಾರಿ ಪೊಲೀಸ್ ಠಾಣೆ: 04, ಬನಶಂಕರಿ ಸಂಚಾರಿ ಪೊಲೀಸ್ ಠಾಣೆ: 03, ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆ:1, ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ: 15, ಕೆಐಎ ಸಂಚಾರಿ ಪೊಲೀಸ್ ಠಾಣೆ :01, ಯಲಹಂಕ ಸಂಚಾರಿ ಪೊಲೀಸ್ ಠಾಣೆ: 5.
ಆರ್ಟಿ ನಗರ ಸಂಚಾರಿ ಪೊಲೀಸ್ ಠಾಣೆ:1, ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆ: 15, ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆ: 08, ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆ: 2, ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆ: 22, ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆ: 16, ಹಲಸೂರು ಸಂಚಾರಿ ಪೊಲೀಸ್ ಠಾಣೆ: 04, ಶಿವಾಜಿನಗರ ಸಂಚಾರಿ ಪೊಲೀಸ್ ಠಾಣೆ: 01, ಪುಲಕೇಶಿನಗರ ಸಂಚಾರಿ ಪೊಲೀಸ್ ಠಾಣೆ: 02, ಕೆ.ಜಿ ಹಳ್ಳಿ ಸಂಚಾರಿ ಪೊಲೀಸ್ ಠಾಣೆ: 03, ಎಲೆಕ್ಟ್ರಾನಿಕ್ ಸಂಚಾರಿ ಪೊಲೀಸ್ ಠಾಣೆ: 4, ಹುಳಿಮಾವು ಸಂಚಾರಿ ಪೊಲೀಸ್ ಠಾಣೆ: 04, ಮೈಕೋ ಲೇಔಟ್ ಸಂಚಾರಿ ಪೊಲೀಸ್ ಠಾಣೆ: 07, ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣೆ: 20, ಹೆಚ್ಎಸ್ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆ: 19, ಆಡುಗೋಡಿ ಸಂಚಾರಿ ಪೊಲೀಸ್ ಠಾಣೆ: 2, ವಿಮಾನ ನಿಲ್ದಾಣ ವ್ಯಾಪ್ತಿ: 7, ಮಡಿವಾಳ ಸಂಚಾರಿ ಪೊಲೀಸ್ ಠಾಣೆ: 10 ಸೇರಿದಂತೆ ಒಟ್ಟು 204 ಮ್ಯಾನ್ ಹೋಲ್ ಸಮಸ್ಯೆ ಇದ್ದು, ಆದಷ್ಟು ಬೇಗ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಟ್ರಾನ್ಸ್ಫಾರ್ಮರ್ಗಳ ಸ್ಥಳಾಂತರ ಮಾಡಲು ಮನವಿ: ನಗರದಲ್ಲಿ ಬಹುತೇಕ ಟ್ರಾನ್ಸ್ಫಾರ್ಮರ್ಗಳ ಸಮಸ್ಯೆಯಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ಅಧಿಕವಾಗಿದೆ. ಹಾಗೆಯೇ ಕೊಂಚ ಮಳೆ ಬಿದ್ರೆ ಸಾಕು ವಿದ್ಯುತ್ ಸಮಸ್ಯೆ ಉಲ್ಬಣಗೊಳ್ಳುತ್ತೆ ಅಥವಾ ಮರ ಬಿದ್ದು ತಂತಿ ಕಟ್ ಆಗಿ ರಸ್ತೆಗೆ ಬೀಳುವುದರಿಂದ ಅಪಘಾತ ಅಥವಾ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಕೆಳಗೆ ಸೂಚಿಸಿದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಬೇರೆ ಕಡೆ ಟ್ರಾನ್ಸ್ಫಾರ್ಮರ್ಗಳ ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಉಪ್ಪಾರಪೇಟೆ:1, ಚಿಕ್ಕ ಪೇಟೆ: 4, ಮಾಗಡಿ ರಸ್ತೆ: 3, ರಾಜಾಜಿನಗರ: 1, ಯಶವಂತಪುರ: 02, ಪೀಣ್ಯಾ: 19, ವಿ.ವಿ ಪುರಂ:2, ಬಸವನಗುಡಿ: 1, ಬನಶಂಕರಿ: 2, ಕೆ.ಎಸ್ ಲೇಔಟ್: 2, ಕಬ್ಬನ್ ಪಾರ್ಕ್: 01, ಅಶೋಕನಗರ: 07, ಕೆ.ಆರ್.ಪುರ 07, ಜೆ.ಬಿ ನಗರ: 2, ಹಲಸೂರು: 4, ಶಿವಾಜಿನಗರ: 1, ಬಾಣಸವಾಡಿ ಸಂಚಾರ: 4, ಕೆ.ಜಿ ಹಳ್ಳಿ: 3, ಎಲೆಕ್ಟ್ರಾನಿಕ್ ಸಿಟಿ: 3, ಮೈಕ್ ಲೇಔಟ್ ಸಂಚಾರ ಠಾಣೆ: 4, ವೈಟ್ ಪೀಲ್ಡ್ ಸಂಚಾರ ಠಾಣೆ: 16, ಆಡುಗೋಡಿ: 1, ವಿಮಾನ ನಿಲ್ದಾಣ: 04 ಸೇರಿ ಒಟ್ಟು 84 ಕಡೆ ಬದಲಾವಣೆಗೆ ಗುರುತಿಸಲಾಗಿದೆ.
ಬೀದಿ ದೀಪಗಳ ಅಳವಡಿಕೆ ಮಾಡಬೇಕಾದ ಸ್ಥಳಗಳ ವಿವರ: ನಗರದ ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳ ಸಮಸ್ಯೆಗಳು ಕಾಡ್ತಿದೆ. ಮಳೆ ಬಂತೆಂದರೆ ಕೆಲವೊಂದು ದೀಪಗಳು ಬೆಳಕು ನೀಡಲ್ಲ. ಮಳೆ ಬಂದಾಗ ರಸ್ತೆಯ ಗುಂಡಿಗಳು ಕಾಣೋದಿಲ್ಲ. ಹೀಗಾಗಿ ಸದ್ಯ ಉಪ್ಪಾರಪೇಟೆ: 2, ಚಿಕ್ಕ ಪೇಟೆ: 1, ಸಿಟಿ ಮಾರ್ಕೆಟ್: 2, ವಿಜಯನಗರ: 1, ಬ್ಯಾಟರಾಯನಪುರ: 7, ಕೆಂಗೇರಿ: 13, ಮಲ್ಲೇಶ್ವರಂ: 3, ರಾಜಾಜಿನಗರ: 2, ಯಶವಂತಪುರ: 19, ಪೀಣ್ಯಾ: 5, ವಿ.ವಿಪುರಂ: 8 ಬಸವನಗುಡಿ: 2, ಜಯನಗರ: 2, ಬನಶಂಕರಿ: 5, ಕೆ.ಎಸ್.ಲೇಔಟ್: 2, ಚಿಕ್ಕಜಾಲ: 12, ಕೆಐಎ: 18, ಯಲಹಂಕ: 55, ಆರ್ಟಿ ನಗರ: 4, ಕಬ್ಬನ್ ಪಾರ್ಕ್: 4, ಅಶೋಕನಗರ: 4, ವಿಲ್ಸನ್ ಗಾರ್ಡನ್: 3, ಕೆ.ಆರ್ ಪುರ: 30, ಜೆ.ಬಿ ನಗರ: 42, ಕೆ.ಜಿ ಹಳ್ಳಿ: 12, ಎಲೆಕ್ಟ್ರಾನಿಕ್ ಸಿಟಿ: 2, ಹುಳಿಮಾವು: 1 ಪ್ರದೇಶದ ಬೀದಿ ದೀಪ ಅಳವಡಿಕೆ ಮಾಡುವಂತೆ ತಿಳಿಸಿದ್ದಾರೆ.
ತ್ಯಾಜ್ಯ ತೆರವು: ನಗರವನ್ನು ತ್ಯಾಜ್ಯ ಮುಕ್ತಗೊಳಿಸಲು ಹೈಕೋರ್ಟ್ ಸೂಚನೆ ನೀಡಿದ್ದರೂ ಕೂಡ ಕೆಂಗೇರಿಯ ಮೈಸೂರು ರಸ್ತೆಯ ಮೈಲಸಂದ್ರ ಜಂಕ್ಷನ್ ಬಳಿ, ಶಿವಾಜಿನಗರ ಎ.ಕೆ.ಸ್ಟೀಟ್, ಕೆ.ಆರ್.ಪುರದ ವೈಟ್ ಫೀಲ್ಡ್ ರಸ್ತೆಯ ಸತ್ಯಕಲ್ಯಾಣ ಮಂಟಪದ ಬಳಿ, ಹಾಗೆಯೇ ನಗರದ ಕೆಲವು ರಸ್ತೆಗಳಲ್ಲಿ ಕಸ ರಾಶಿಯಾಗಿ ಬಿದ್ದಿದ್ದು, ಮಳೆ ಬಂದಾಗ ಬಹಳಷ್ಟು ಅಡಚಣೆಯಾಗುವ ಕಾರಣ ಕಸ ತೆರವು ಮಾಡುವಂತೆ ಮನವಿ ಮಾಡಿದ್ದಾರೆ.
ರಸ್ತೆ ಗುಂಡಿಗಳ ಸಮಸ್ಯೆ: ಸದ್ಯ ನಗರದ ಬಹುತೇಕ ಕಡೆಗಳಲ್ಲಿ ಮಳೆ ಬಂದ ಕಾರಣ ರಸ್ತೆ ಗುಂಡಿಗಳು ಹೆಚ್ಚಾಗಿವೆ. ಈ ಹಿಂದೆ ಹೈಕೋರ್ಟ್ ಕೂಡ ರಸ್ತೆ ಗುಂಡಿಗಳನ್ನ ಸರಿಪಡಿಸುವಂತೆ ಬಿಬಿಎಂಪಿಗೆ ಚಾಟಿ ಬೀಸಿತ್ತು. ಆದರೂ ಕೂಡ ಸದ್ಯ ಮತ್ತೆ ಅದೇ ಸಮಸ್ಯೆಗಳು ನಗರದಲ್ಲಿ ಕಾಣುತ್ತಿದ್ದು, ಟ್ರಾಫಿಕ್ ಪೊಲೀಸರು ನೂರಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ ಪಾಲಿಕೆಗೆ ವರದಿ ಸಲ್ಲಿಕೆ ಮಾಡಿ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ವಾಹನ ಸವಾರರೊಬ್ಬರು ಮಾತನಾಡಿ, ನಗರದಲ್ಲಿ ಮಳೆ ಶುರುವಾಗಿದೆ. ಸದ್ಯ ಮಳೆಯಿಂದಾಗಿ ಎದುರಾಗುವ ಸಮಸ್ಯೆಗಳನ್ನು ಆದಷ್ಟು ಬೇಗ ಕ್ಲೀಯರ್ ಮಾಡಬೇಕು. ಇಲ್ಲದಿದ್ದರೆ ಮತ್ತಷ್ಟು ಸಮಸ್ಯೆ ಉಲ್ಬಣವಾಗಿ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಿ ಎಂದು ಕೋರಿಕೊಂಡಿದ್ದಾರೆ.