ಬೆಂಗಳೂರು: ಚಾಲಕರ ನಿರ್ಲಕ್ಷ್ಯದಿಂದ ದೊಡ್ಡ ಟಿಪ್ಪರ್ಗಳು ನಗರದಲ್ಲಿ ಸರಣಿ ಬಲಿ ಪಡೆದಿದೆ. ಈ ಹಿನ್ನೆಲೆ ನಗರದ ಟ್ರಾಫಿಕ್ ಪೊಲೀಸರು ಲಾರಿ ಚಾಲಕರಿಗೆ ನಡುರಸ್ತೆಯಲ್ಲೇ ಟ್ರಾಫಿಕ್ ಕ್ಲಾಸ್ ಹೇಳಿಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಟಿಪ್ಪರ್ ಲಾರಿಗೆ ಬಾಲ ಕಲಾವಿದೆ ಸಮನ್ವಿ ಬಲಿಯಾಗಿದ್ದಳು. ಪಾಲಿಕೆ ಕಸದ ಲಾರಿಗೆ ಸಿಲುಕಿ ವೈದ್ಯಕೀಯ ವಿದ್ಯಾರ್ಥಿನಿ ಸಾವಿಗೀಡಾಗಿದ್ದರು. ಭಾನುವಾರವಷ್ಟೇ ದಿನಪತ್ರಿಕೆಯ ಹಿರಿಯ ಪತ್ರಕರ್ತರೊಬ್ಬರು ಲಾರಿ ಪಲ್ಟಿ ಹೊಡೆದ ಪರಿಣಾಮ ಮೃತಪಟ್ಟಿದ್ದರು. ಕ್ಯಾಂಟರ್, ಲಾರಿ, ಟಿಪ್ಪರ್, ಬಿಬಿಎಂಪಿ ಕಸದ ಲಾರಿಗಳಿಂದ ಸರಣಿ ಅಪಘಾತ ಪ್ರಕರಣಗಳು ಸಂಭವಿಸಿವೆ. ಈ ಹಿನ್ನೆಲೆ ಟ್ರಾಫಿಕ್ ಪೊಲೀಸರು ಚಾಲಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಲಾರಿ ಚಾಲಕರಿಗೆ ಎಚ್ಚರಿಕೆ ನೀಡಲು ಹೊಸ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಲಾರಿ ಚಾಲಕರಿಗೆ ನಡುರಸ್ತೆಯಲ್ಲೇ ನೈಟ್ ಚೆಕ್ ಪೋಸ್ಟ್ ಹಾಕಿ, ಟ್ರಾಫಿಕ್ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ. ಲಾರಿ ಮೇಲೆ ದಾಖಲಾಗಿರುವ ಹಳೆಯ ಕೇಸ್ ಪರಿಶೀಲಿಸಿ ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ. ಕ್ರಿಮಿನಲ್ ಕೇಸ್ ದಾಖಲಿಸೋ ಬಗ್ಗೆಯೂ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿದಿನ 30ಕ್ಕೂ ಹೆಚ್ಚು ಚಾಲಕರಿಗೆ ಟ್ರಾಫಿಕ್ ಪೊಲೀಸರ ಕ್ಲಾಸ್:
ರಾಜಧಾನಿಯ ಎಲ್ಲ ಕಡೆ ರಾತ್ರಿ ವೇಳೆ ಚೆಕ್ ಪೋಸ್ಟ್ ಹಾಕಿ ತಪಾಸಣೆ ನಡೆಸಲಾಗುತ್ತಿದೆ. ಹೀಗೆ ಪ್ರತಿದಿನ 30ಕ್ಕೂ ಹೆಚ್ಚು ಚಾಲಕರಿಗೆ ಟ್ರಾಫಿಕ್ ಪೊಲೀಸರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
123 ಮಾರಣಾಂತಿಕ ಅಪಘಾತ:
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾರಿಗಳಿಂದಲೇ ಹೆಚ್ಚು ಆ್ಯಕ್ಸಿಡೆಂಟ್ಗಳಾಗಿವೆ. ಒಂದೇ ವರ್ಷದಲ್ಲಿ 123 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಪಾಲಿಕೆ ಕಸದ ಲಾರಿಗಳಿಂದಲೇ 10ಕ್ಕೂ ಹೆಚ್ಚು ಆ್ಯಕ್ಸಿಡೆಂಟ್ಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ