ಬೆಂಗಳೂರು: ಕೇಂದ್ರ ಹಾಗೂ ರಾಜ್ಯದ ಕೃಷಿ ಕಾಯ್ದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಹಮ್ಮಿಕೊಳ್ಳಲಿರುವ ಟ್ರ್ಯಾಕ್ಟರ್ ಪರೇಡ್ಗೆ ನಗರ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅನುಮತಿ ನೀಡಲು ನಿರಾಕರಿಸಿದ್ದಾರೆ. ಬದಲಾಗಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಮಲ್ ಪಂತ್, ನಾಳೆ ಗಣರಾಜ್ಯೋತ್ಸವ ಬಂದೋಬಸ್ತ್ ಜೊತೆಗೆ ರೈತರ ಪ್ರತಿಭಟನೆಗೂ ಪೊಲೀಸರನ್ನು ನಿಯೋಜಿಸಬೇಕಿದೆ. ಟ್ರ್ಯಾಕ್ಟರ್ ಮೂಲಕ ಪ್ರತಿಭಟಿಸಿದರೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಈ ದಿಸೆಯಲ್ಲಿ ರೈತ ಪರ ಸಂಘಟನೆಗಳು ಶಾಂತಿಯುತ ಪ್ರತಿಭಟನೆಗೆ ಮಾತ್ರ ಸೀಮಿತ ಮಾಡಿಕೊಳ್ಳಬೇಕಿದೆ. ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆಗೆ ಬಂದರೆ ಅವರನ್ನು ನಗರದೊಳಗೆ ಪ್ರವೇಶಿಸಲು ನಿರಾಕರಿಸಲಾಗುತ್ತದೆ. ಸಾಂಕೇತಿಕವಾಗಿಯೂ ಟ್ರ್ಯಾಕ್ಟರ್ನಲ್ಲಿ ಪ್ರತಿಭಟನೆ ಮಾಡಕೂಡದು ಎಂದು ಹೇಳಿದ್ರು. ಈ ಹಿಂದೆ ಎಂದೂ ಟ್ರ್ಯಾಕ್ಟರ್ನಲ್ಲಿ ನಗರದಲ್ಲಿ ಯಾವುದೇ ಪ್ರತಿಭಟನೆ ನಡೆದಿಲ್ಲ. ಬಸ್ಸು, ಬೈಕ್, ಕಾರು ಹಾಗೂ ಜೀಪ್ಗಳಲ್ಲಿ ಬಂದು ಪ್ರತಿಭಟನೆ ನಡೆಸಲು ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾಳೆ ಗಣರಾಜ್ಯೋತ್ಸವ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಇರಲಿದೆ. ಅಲ್ಲದೆ ನಾಳಿನ ಪರಿಸ್ಥಿತಿ ನೋಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಕೆಲವರು ಅರ್ಜಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದರು.
ಇದನ್ನೂ ಓದಿ:TRP ಹಗರಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಾರ್ಕ್ ಮಾಜಿ ಸಿಇಒ