ಕೊಪ್ಪಳ: ಕೊರೊನಾದಿಂದಾಗಿ ರಾಜ್ಯದ ಪ್ರವಾಸಿ ತಾಣಗಳು ಭಣಗುಡುತ್ತಿದೆ. ಇನ್ನು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದ ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರು ಎಲ್ಲಾ ಸಮಯದಲ್ಲೂ ತುಂಬಿರುತ್ತಿದ್ದರು. ಆದರೆ ಕಳೆದ ಐದಾರು ತಿಂಗಳಿನಿಂದ ಹಂಪೆಯೂ ಸಹ ಜನರಿಲ್ಲದೆ ಸೊರಗಿದೆ.
ಕೊಪ್ಪಳ ಜಿಲ್ಲೆಯ ಆನೆಗುಂದಿ ಭಾಗಕ್ಕೆ ಭೇಟಿ ನೀಡದೆ ಇದ್ದರೆ ಅವರಿಗೆ ಹಂಪೆ ಪ್ರವಾಸ ಕಂಪ್ಲೀಟ್ ಆಗೋದಿಲ್ಲ ಅನ್ನೋವಷ್ಟರ ಮಟ್ಟಿಗೆ ಪ್ರವಾಸಿಗರ ಭಾವನೆ ಇದೆ. ಅದಕ್ಕೆ ಕಾರಣ ಗಂಗಾವತಿ ತಾಲೂಕಿನ ಆನೆಗುಂದಿ ಭಾಗದಲ್ಲಿರುವ ಅನೇಕ ಪ್ರವಾಸಿ ತಾಣಗಳು ಕೈಬೀಸಿ ಕರೆಯುತ್ತವೆ. ಹಂಪೆಗೆ ಬರುವ ಬಹುಪಾಲು ಪ್ರವಾಸಿಗರು ಆನೆಗುಂದಿ ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿಯೇ ಹೋಗುತ್ತಾರೆ.
ಅದರಲ್ಲೂ ಸಾಣಾಪುರ ಕೆರೆ ಅಂದರೆ ವಿದೇಶಿ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಈ ಬಾರಿ ಈಗಾಗಲೇ ತುಂಗಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಬಿಡಲಾಗಿದೆ. ತುಂಗಭದ್ರಾ ಎಡದಂಡೆ ಮುಖ್ಯ ನಾಲೆ ಈ ಸಾಣಾಪುರ ಕೆರೆಯ ಮೂಲಕವೇ ಮುಂದೆ ಸಾಗುತ್ತದೆ. ಹೀಗಾಗಿ ಸಾಣಾಪುರ ಕೆರೆ ಈಗಾಗಲೇ ನೀರಿನಿಂದ ತುಂಬಿ ತುಳುಕುತ್ತಿದೆ.
ಸುತ್ತಲೂ ಬೆಟ್ಟಗುಡ್ಡದಿಂದ ಕೆರೆ ಸುತ್ತುವರಿದಿದ್ದು ಕಣ್ಣು ಹಾಯಿಸಿದರೆ ತಿಳಿನೀರು, ಹಚ್ಚ ಹಸಿರಿನ ಭತ್ತದ ಗದ್ದೆಗಳು ಕಾಣುತ್ತವೆ. ಸಾಣಾಪುರ ಕೆರೆ ಈಗ ಅತ್ಯಂತ ರಮಣೀಯವಾಗಿ ಕಂಗೊಳಿಸುತ್ತಿದೆ. ಆದರೆ ಈ ಬಾರಿ ಪ್ರವಾಸಿಗರಿಲ್ಲದೆ ಭಣಗುಡುತ್ತಿದೆ. ಪ್ರತಿ ವರ್ಷವೂ ಸಾಣಾಪುರ ಕೆರೆಗೆ ಪ್ರವಾಸಿಗರ ದಂಡೇ ಬರುತ್ತಿತ್ತು. ಎತ್ತರದ ಬಂಡೆಗಳಿಂದ ಕೆರೆಯಲ್ಲಿ ಧುಮುಕಿ ಸಾಹಸ ಕ್ರೀಡೆಯಾಡುತ್ತಿದ್ದ ಪ್ರವಾಸಿಗರು ಕಣ್ಮರೆಯಾಗಿದ್ದಾರೆ.
ಆದರೆ ಈ ಬಾರಿ ಕೊರೊನಾ ಪ್ರವಾಸೋದ್ಯಮಕ್ಕೆ ಕೊಕ್ಕೆ ಹಾಕಿದೆ. ಹೀಗಾಗಿ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. ಹೀಗಾಗಿ ಪ್ರವಾಸಿಗರಿಲ್ಲದೆ ಕೆರೆ ನಿರ್ಜನವಾಗಿದೆ. ಇನ್ನು ಸಾಣಾಪುರ ಕೆರೆಗೆ ಬರುತ್ತಿದ್ದ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಅನೇಕ ಮಂದಿ ಕೆಲಸವಿಲ್ಲದೆ ಕುಳಿತುಕೊಂಡಿದ್ದಾರೆ. ಅನೇಕ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದವರ ಬದುಕು ಸಹ ತಣ್ಣಗಾಗಿದೆ.
ಒಟ್ನಲ್ಲಿ ಪ್ರವಾಸಿಗರಿಂದ ಕಂಗೊಳಿಸಬೇಕಾಗಿದ್ದ ಆನೆಗುಂದಿಯ ಪ್ರವಾಸಿ ತಾಣಗಳು ಕೊರೊನಾ ಹೊಡೆಕ್ಕೆ ಸಿಲುಕಿ ನಿರ್ಜನ ಪ್ರದೇಶದಂತೆ ರೂಪತಾಳಿದೆ.