ಬೆಂಗಳೂರು: ಕೋವಿಡ್ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದು ಇಂದು ಬೆಂಗಳೂರಿಗೆ ಟಫ್ ರೂಲ್ಸ್ ಜಾರಿಗೊಳಿಸಲಾಗುತ್ತದೆ. ಆದರೆ ಸಾರ್ವಜನಿಕರ ಸಹಕಾರ ಇಲ್ಲದೇ ಇದ್ದಲ್ಲಿ ಯಾವ ನಿಯಮವೂ ಸಫಲವಾಗಲ್ಲ. ಹಾಗಾಗಿ ಜನರು ಸರ್ಕಾರಕ್ಕೆ ಸಹಕಾರ ನೀಡಬೇಕು. ಕೊರೊನಾ ನಿಯಮ ಪಾಲನೆ ಮಾಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್.ಟಿ.ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರುವ ರೂಲ್ಸ್ ಸರಿಯಾಗಿ ಪಾಲನೆಯಾಗಬೇಕು. ಸಾರ್ವಜನಿಕರ ಸಹಕಾರ ಇಲ್ಲದೆ ಇದು ಅಸಾಧ್ಯ. ಮಾರುಕಟ್ಟೆ, ಸಾರ್ವಜನಿಕರು ಸೇರುವಂತಹ ಜಾಗದಲ್ಲೆಲ್ಲಾ ಜನರೇ ಸ್ವಯಂ ನಿರ್ಬಂಧ ಮಾಡಿಕೊಳ್ಳಬೇಕು. ನಾವು ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮಾಡುತ್ತೇವೆ. ಆದರೆ ಸಾರ್ವಜನಿಕರು ಸಹಕಾರ ಮಾಡಿದರೆ ಮಾತ್ರ ಇದು ಯಶಸ್ವಿಯಾಗಲು ಸಾಧ್ಯ ಎಂದರು.
ಬೇರೆ ಬೇರೆ ರಾಜ್ಯಗಳಿಂದ ಆಗಮಿಸುವ ಜನರು ಬೆಂಗಳೂರಿನಲ್ಲಿ ಓಡಾಡುತ್ತಿದ್ದಾರೆ. ಹಾಗಾಗಿ ನಮ್ಮ ನಿಯಂತ್ರಣವನ್ನು ನಾವು ನೋಡಿಕೊಳ್ಳಬೇಕು. ಈಗ ಜಾರಿಗೊಳಿಸಿರುವ ನಿಯಮ ಪಾಲನೆಯಾಗಬೇಕು. ಇನ್ನೂ ಹೆಚ್ಚಿನ ನಿರ್ಬಂಧ ಹಾಕಬೇಕು ಎನ್ನುವ ಬಗ್ಗೆ ಕಳೆದ 2 ದಿನದಿಂದ ಚರ್ಚೆ ಮಾಡುತ್ತಿದ್ದೇವೆ. ತಜ್ಞರ ಸಮಿತಿ ಅಭಿಪ್ರಾಯ ಪಡೆದಿದ್ದೇವೆ ಈ ಸಂಬಂಧ ನಿನ್ನೆ ಸಭೆ ಮಾಡಿದ್ದೇವೆ ಎಂದು ಹೇಳಿದರು.
ಈಗಾಗಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಸೇರಿದಂತೆ ಇನ್ನು ಹಲವಾರು ಸಲಹೆಗಳನ್ನು ತಜ್ಞರ ಸಮಿತಿಯವರು ಕೊಟ್ಟಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ತಿಳಿಸಿದರು.
ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಗಿ: ಸಾರಿಗೆ ಮುಷ್ಕರದ ಕುರಿತು ಸಾರಿಗೆ ಸಚಿವರು ಕೂಲಂಕುಷವಾಗಿ ಪರಿಶೀಲನೆ ಮಾಡಿ ಇಲಾಖೆ ಅಭಿಪ್ರಾಯವನ್ನು ಚರ್ಚೆ ಮಾಡಿ ನಂತರ ಮುಖ್ಯಮಂತ್ರಿಗಳ ಜೊತೆ ಹಣಕಾಸಿನ ಇಲಾಖೆ ಜೊತೆ ಚರ್ಚೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದಾರೆ. ಹಾಗಾಗಿ ಸದ್ಯಕ್ಕೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಕರ್ತವ್ಯಕ್ಕೆ ಹಾಜರಾಗಿ ಎಂದು ಸಿಬ್ಬಂದಿಗೆ ಗೃಹ ಸಚಿವರು ಮನವಿ ಮಾಡಿದರು.
ಕಾನೂನು ಉಲ್ಲಂಘನೆ ಮಾಡಿದರೆ, ಬೇರೆ ನೌಕರರಿಗೆ ಕೆಲಸ ಮಾಡಲು ತೊಂದರೆ ಮಾಡಿದರೆ, ಅದಕ್ಕೆ ಅದರದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಕೋಡಿಹಳ್ಳಿ ಚಂದ್ರಶೇಖರ್ ಬೇರೆ ವಿಷಯಕ್ಕಾಗಿ ಇಂದು ಬಂದಿದ್ದರೂ ಅದರ ಜೊತೆಗೆ ಸಾರಿಗೆ ಮುಷ್ಕರದ ವಿಷಯವನ್ನು ಚರ್ಚೆ ಮಾಡಿದ್ದೇವೆ. ಅವರು ಸಾರಿಗೆ ನೌಕರರ ವಿಚಾರವನ್ನು ಹೇಳಿದ್ದಾರೆ. ನಾನು ಕೂಡ ಬಹಳ ಸ್ಪಷ್ಟವಾಗಿ ಅವರಿಗೆ ಹೇಳಿದ್ದೇನೆ. ಸಮಯ ಸಂದರ್ಭ ಇದಲ್ಲ. ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಣೆಯಾಗಿಲ್ಲ. ಹೀಗಾಗಿ ಮುಷ್ಕರವನ್ನು ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾಗಿ, ನಿಮ್ಮ ವಿಚಾರಗಳನ್ನು ಮುಖ್ಯಮಂತ್ರಿಗಳು ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. ನೌಕರರ ಸಾರ್ವಜನಿಕರ ಹಿತದೃಷ್ಟಿಯಿಂದ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು. ಮುಷ್ಕರವನ್ನು ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾಗಿ ಎಂದು ಕೋರಿದರು.
ಸಿಎಂ ಅಂತಿಮ ನಿರ್ಧಾರ: ಇಂದು ಬೆಂಗಳೂರು ಸಚಿವರು, ಶಾಸಕರು, ಸಂಸದರ ಸಭೆ ನಡೆಸುತ್ತಿದ್ದೇವೆ. ನಂತರ ಎಂತಹ ನಿಯಮ ಜಾರಿಗೆ ತರಬೇಕು ಎಂದು ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಿಮವಾಗಿ ಮುಖ್ಯಮಂತ್ರಿಗಳು ಏನು ಕ್ರಮ ಕೈಗೊಳ್ಳಬಹುದು ಯಾವ ರೀತಿ ನಿಯಂತ್ರಣ ಮಾಡಬೇಕು ಎನ್ನುವುದನ್ನು ನಿರ್ಧರಿಸಲಿದ್ದಾರೆ ಎಂದರು.
ಬೆಂಗಳೂರಿನ ಕೋವಿಡ್ ಸ್ಥಿತಿ ಉಲ್ಬಣವಾಗಿದೆ. ಪರಿಸ್ಥಿತಿ ನಿಭಾಯಿಸಲು ಏನೆಲ್ಲ ಕ್ರಮಗಳನ್ನು ಈಗಾಗಲೆ ತೆಗೆದುಕೊಳ್ಳಲಾಗಿದೆ ಎನ್ನುವುದು ಮತ್ತು ಮುಂದೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂದು ಸುದೀರ್ಘವಾಗಿ ಚರ್ಚೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಯಾವ ರೀತಿ ಪರಿಸ್ಥಿತಿ ನಿಯಂತ್ರಿಸಬೇಕು ಎಂಬ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಹೊರರಾಜ್ಯದಿಂದ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ ಹಾಗಾಗಿ ಮತ್ತು ಡಿಸಿಪಿಗಳು ಮತ್ತು ಎಸಿಪಿ ಗಳಿಗೆ ನೋಡಲ್ ಅಧಿಕಾರಿಗಳಿಗೆ ಉಸ್ತುವಾರಿ ನೀಡಿ ಕಳೆದ ಬಾರಿ ಮಾಡಿದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.