ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರ ವಾಪಸು ಪಡೆಯಲು ಇಂದು ಕೊನೆಯ ದಿನವಾಗಿದ್ದು, ಒಟ್ಟು 20 ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಆ ಮೂಲಕ 91 ಅಭ್ಯರ್ಥಿಗಳು ಮೇಲ್ಮನೆ ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ.
ವಿಧಾನಪರಿಷತ್‌ನ 20 ಕ್ಷೇತ್ರಗಳಿಂದ ಒಟ್ಟು 121 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಒಟ್ಟು 121 ಅಭ್ಯರ್ಥಿಗಳಿಂದ 215 ನಾಮಪತ್ರ ಸ್ವೀಕಾರ ಮಾಡಲಾಗಿತ್ತು. ಈ ಪೈಕಿ 119 ಪುರುಷರು ಹಾಗೂ ಇಬ್ಬರು ಮಹಿಳೆಯರು ನಾಮಪತ್ರ ಸಲ್ಲಿಕೆ ಮಾಡಿದ್ದರು.
ಪಕ್ಷೇತರರಿಂದ 68 ನಾಮಪತ್ರ ಸಲ್ಲಿಕೆ ಮಾಡಲಾಗಿತ್ತು. ಒಟ್ಟು 10 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕಾರವಾಗಿತ್ತು. ಇಂದು ಒಟ್ಟು 20 ಮಂದಿ ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸು ಪಡೆದಿದ್ದಾರೆ. ಇದರಲ್ಲಿ ಒಬ್ಬರು ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಇದೀಗ ಕಣದಲ್ಲಿ 91 ಅಭ್ಯರ್ಥಿಗಳಿದ್ದಾರೆ.
ದ.ಕನ್ನಡದಲ್ಲಿ 4 ಪಕ್ಷೇತರ ಅಭ್ಯರ್ಥಿಗಳು, ಶಿವಮೊಗ್ಗ 2, ಬೆಳಗಾವಿ 3, ಬಿಜಾಪುರ 4, ಧಾರವಾಡ 1, ತುಮಕೂರು 1, ಬೆಂಗಳೂರು 1, ರಾಯಚೂರು, ಉ.ಕನ್ನಡ ಹಾಗೂ ಮೈಸೂರಿನ ತಲಾ 1 ಪಕ್ಷೇತರ ಅಭ್ಯರ್ಥಿಗಳು ಹಾಗೂ ಕೊಡಗಿನಿಂದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದಾರೆ.