ಬೆಂಗಳೂರು: ನಾಳೆಯಿಂದ ಎಲ್ಲಾ ಹೋಟೆಲ್ಗಳ ಕಿಚನ್ಗಳನ್ನು ಮಾತ್ರ ತೆರೆದಿಟ್ಟು, ತಿಂಡಿ, ತಿನಿಸುಗಳನ್ನು ಪಾರ್ಸಲ್ ಮಾಡಲು ಮಾತ್ರ ಅವಕಾಶ ಇರಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯದ ಎಲ್ಲಾ ಪಾಲಿಕೆಗಳ ವ್ಯಾಪ್ತಿಯ ಹೋಟೆಲ್ಗಳಿಗೆ ಈ ನಿರ್ಬಂಧ ಅನ್ವಯವಾಗಲಿದೆ. ಹೋಟೆಲ್ ಮಾಲೀಕರು ಕೇವಲ ಕಿಚನ್ ತೆರೆದಿರಬೇಕು. ಗ್ರಾಹಕರಿಗೆ ಆಹಾರವನ್ನು ಪಾರ್ಸಲ್ ಮಾಡಿಕೊಡಬೇಕು. ಇದಕ್ಕೆ ಸಹಕರಿಸಬೇಕು. ನಾಳೆ ಸಂಜೆಯಿಂದ ಈ ನಿರ್ಬಂಧ ಜಾರಿಗೆ ಬರಲಿದೆ ಎಂದರು.
ಮಾರ್ಚ್ 31ರವರೆಗೆ ಬಾರ್, ಪಬ್, ಕ್ಲಬ್ಗಳನ್ನು ಯಾವುದನ್ನೂ ತೆರೆಯಕೂಡದು. ನಾಳೆ ಸಂಜೆಯಿಂದ ಇದು ಅನ್ವಯವಾಗಲಿದೆ. ಪ್ರಧಾನಿ ಜೊತೆ ಅರ್ಥಪೂರ್ಣ ಚರ್ಚೆ ಆಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ. ಕೋವಿಡ್ -19 ಪ್ರಕರಣ ಹೆಚ್ಚುತ್ತಿದ್ದು, ಇದು ಎಚ್ಚರಿಕೆ ಗಂಟೆ ಎಂದು ಪಿಎಂ ತಿಳಿಸಿದ್ದಾರೆ.
ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ, ಕಲಬುರಗಿಯಲ್ಲಿ ಪ್ರಯೋಗಾಲಯ ತೆರೆಯಲು ಪ್ರಧಾನಿ ಸಮ್ಮತಿ ಸೂಚಿಸಿದ್ದಾರೆ. ಆಹಾರ ಮತ್ತು ಔಷಧಿ ಕೊರತೆ ಬರದಂತೆ ವರ್ತಕರ ಜೊತೆ ಸಂಪಕರ್ದಲ್ಲಿರುವಂತೆ ಸೂಚನೆ ನೀಡಿದ್ದಾರೆ. ಕೊರೊನಾ ನಿಯತ್ರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪ್ರಧಾನಿ ಸಲಹೆ ನೀಡಿದ್ದಾರೆ. ಕೇಂದ್ರದಿಂದ ಅಗತ್ಯ ಎಲ್ಲಾ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಭಾನುವಾರ ಜನತಾ ಕರ್ಫ್ಯೂ ಸಫಲವಾಗುವ ನಿಟ್ಟಿನಲ್ಲಿ ಪಿಎಂಗೆ ಭರವಸೆ ನೀಡಿದ್ದೇವೆ ಎಂದರು. 500 ವೆಂಟಿಲೇಟರ್ ಖರೀದಿಗೆ ಸೂಚನೆ ನೀಡಿದ್ದೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆ ಅಬಾಧಿತ:
ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ಬಗ್ಗೆ ಇದ್ದ ಗೊಂದಲಕ್ಕೆ ಸಿಎಂ ತೆರೆ ಎಳೆದಿದ್ದಾರೆ. 10ನೇ ತರಗತಿ ಪರೀಕ್ಷೆ ನಿಗದಿಯಂತೆ ನಡೆಯುತ್ತದೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ಅಂತರದಲ್ಲಿ ಕೂರಿಸಲು ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.