ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಬೆಳಗ್ಗೆ 10 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ನಿಂದ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ತಾಲೂಕು ಕ್ರೀಡಾಂಗಣ ತಲುಪಲಿರುವ ಬೃಹತ್ ರ‍್ಯಾಲಿಯಲ್ಲಿ ಸುದೀಪ್ ಪಾಲ್ಗೊಳ್ಳಲಿದ್ದಾರೆ. ಬೃಹತ್ ಮೆರವಣಿಗೆ ನಂತರ ತಾಲೂಕು ಕಚೇರಿಯಲ್ಲಿ ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಈ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ : 2 ಬಾರಿ ಸಮ್ಮಿಶ್ರ ಸರ್ಕಾರ ಮಾಡಿ ಸಾಕಷ್ಟು ಕಹಿ ಅನುಭವಿಸಿದ್ದೇವೆ, ಈ ಸಲ 123 ಸೀಟು ಬರುತ್ತೆ: ನಿಖಿಲ್ ಕುಮಾರಸ್ವಾಮಿ
ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಸಿಎಂ ಬೊಮ್ಮಾಯಿ ಅವರಿಗೆ ಈ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಿ, ಅವರ ಪರ ಪ್ರಚಾರ ನಡೆಸುವುದಾಗಿ ಸುದೀಪ್ ಹೇಳಿದ್ದರು. ಇದೀಗ ನಾಳೆ ಸಿಎಂ ನಾಮಪತ್ರ ಸಲ್ಲಿಕೆ ವೇಳೆ ನಡೆಯಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಧಿಕೃತವಾಗಿ ಸಿಎಂ ಬೊಮ್ಮಾಯಿ ಪರ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ಇದನ್ನೂ ಓದಿ : ಇನ್ಮುಂದೆ ಅವರ ದಾರಿ ಅವರದು, ನಮ್ಮ ದಾರಿ ನಮ್ಮದು: ಬಿ.ಎಸ್.ಯಡಿಯೂರಪ್ಪ
ಇನ್ನು ಬೊಮ್ಮಾಯಿಗೆ ಕಠಿಣ ಸವಾಲು ಎದುರಾಗಲಿದೆ ಎನ್ನುವ ಸ್ಥಿತಿ ಇದ್ದು, ಪ್ರತಿಪಕ್ಷಗಳು ಸಿಎಂ ಬೊಮ್ಮಾಯಿ ಅವರನ್ನು ಶಿಗ್ಗಾಂವಿಯಲ್ಲಿಯೇ ಕಟ್ಟಿಹಾಕಬೇಕು ಎನ್ನುವ ತಂತ್ರಗಾರಿಕೆ ಹೆಣೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಎಂ ಬೊಮ್ಮಾಯಿ ನಟ ಸುದೀಪ್ ಅವರನ್ನು ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಿದ್ದಾರೆ. ಇನ್ನು ಪಕ್ಷದ ಜಿಲ್ಲೆಯ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ಆ ಕ್ಷೇತ್ರದಲ್ಲಿಯೂ ಸುದೀಪ್ ಅವರನ್ನು ಕರೆದೊಯ್ದು ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಸುದೀಪ್ ಪ್ರಚಾರಕ್ಕೆ ನಾಯಕ ಸಮಾಜ ಮುಖಂಡರ ಆಕ್ಷೇಪ : ಸುದೀಪ್ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ರಾಜಕೀಯ ಪ್ರಚಾರದಲ್ಲಿ ಪಾಲ್ಗೊಳ್ಳಬಾರದೆಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ ಆಕ್ಷೇಪದ ಜೊತೆಗೆ ಮನವಿ ಮಾಡಿದ್ದಾರೆ. ಇಂದು ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದ್ಯಾವಪ್ಪನಾಯಕ, ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಹದಿನೈದು ಮೀಸಲು ಕ್ಷೇತ್ರಗಳಿದ್ದು, ಈ ಕ್ಷೇತ್ರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಂದ ನಮ್ಮ ಜನಾಂಗದವರೇ ಸ್ಪರ್ಧೆ ಮಾಡುತ್ತಾರೆ. ಹೀಗಾಗಿ ಚುನಾವಣೆಯಲ್ಲಿ ಯಾರೇ ಗೆದ್ದರೂ-ಸೋತರು ಸಮುದಾಯದವರೇ ಆಗಿರುತ್ತಾರೆ. ಇದರಿಂದ ಇಲ್ಲಿ ಒಂದು ಪಕ್ಷದ ಪರವಾಗಿ ನೀವು ಪ್ರಚಾರಕ್ಕೆ ಹೋದರೆ ಜನಾಂಗದ ಜನರಲ್ಲಿ ತಪ್ಪು ಭಾವನೆ ಮೂಡುವ ಸಂಭವವಿದೆ ಎಂದು ಹೇಳಿದ್ದರು.
ಇದನ್ನೂ ಓದಿ : ನಟ ಸುದೀಪ್ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಡಿ: ನಾಯಕ ಸಮಾಜದ ಮುಖಂಡರ ಆಕ್ಷೇಪ