ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಹಲವರು 2020ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯಲು ಹಿಂದೇಟು ಹಾಕಿದ್ದರು. ಇದೀಗ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ್ದು, ನಾಳೆಯಿಂದ ರಾಜ್ಯಾದ್ಯಂತ ಪರೀಕ್ಷೆ ನಡೆಯಲಿದೆ.
ಸೋಮವಾರದಿಂದ ಶುರುವಾಗುವ ಪರೀಕ್ಷೆ ಸೆಪ್ಟೆಂಬರ್ 19ರವರೆಗೆ ರಾಜ್ಯದ ಒಟ್ಟು 350 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 37 ವಿಷಯಗಳಲ್ಲಿ 2,12,652 ( ಹುಡುಗರು-1,29,975, ಹುಡುಗಿಯರು- 82,677) ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಕಲಾ ವಿಭಾಗದಲ್ಲಿ- 90,615, ವಾಣಿಜ್ಯ ವಿಭಾಗ- 74,476, ಹಾಗೂ ವಿಜ್ಞಾನ ವಿಭಾಗ- 47,561 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೂ ಇಲಾಖೆಯಿಂದ ಈಗಾಗಲೇ ಪರೀಕ್ಷಾ ಪ್ರವೇಶ ಪತ್ರಗಳನ್ನು ನೀಡಲಾಗಿದೆ. ಕೋವಿಡ್ ಸಂಬಂಧ ಆರೋಗ್ಯ ಇಲಾಖೆಯು ಮಾರ್ಗಸೂಚಿ ನೀಡಿದ್ದು, ಅದರಂತೆ ಪರೀಕ್ಷೆಗಳನ್ನು ನಡೆಸಲು ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ವಿಶೇಷ ಜಾಗೃತ ದಳದ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ಗಳನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜೊತೆಗೆ ಪರೀಕ್ಷಾ ಕೇಂದ್ರಗಳಿಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವುದನ್ನ ನಿರ್ಬಂಧಿಸಲಾಗಿದೆ.