ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ನಾಳೆ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಳೆ ಎಐಸಿಸಿ ವತಿಯಿಂದ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಕೋವಿಡ್ ವಿಚಾರದಲ್ಲಿ ಬಡವರಿಗೆ ಸಹಾಯ ಮಾಡಬೇಕು ಎನ್ನುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಶಯವಾಗಿದೆ. ಹಾಗಾಗಿ ನಾಳೆ ಅವಕಾಶ ಇರುವ ಕಡೆಗಳಲ್ಲಿ ಪಕ್ಷದ ನಾಯಕರು ಆಹಾರ ಪದಾರ್ಥಗಳ ಕಿಟ್ ವಿತರಿಸಿ ಹಾಗೂ ರಕ್ತದಾನ ಮಾಡಿ, ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನೂ ಮಾಡಬಹುದು. ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದರೂ ಕೆಪಿಸಿಸಿ ವತಿಯಿಂದ ಅದನ್ನು ಒದಗಿಸಲಾಗುವುದು ಎಂದರು.
ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ಕಾರ್ಯಕರ್ತರೇ ಸೇವಾ ಕಾರ್ಯದಲ್ಲಿ ತೊಡಗಬಹುದಾಗಿದೆ. ಅವರಿಗೆ ಪಕ್ಷವೇ ಎಲ್ಲಾ ವಿಧದ ಸಹಕಾರ ನೀಡಲಿದೆ. ಶಾಸಕರು ಇರುವ ಕಡೆಗಳಲ್ಲಿ ಪಕ್ಷದ ಆರ್ಥಿಕ ಸಹಕಾರ ಇರುವುದಿಲ್ಲ. ಅಲ್ಲಿ ಶಾಸಕರೇ ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಮುಖಂಡರು ಯಾವ ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡಬೇಕು ಎನ್ನುವುದನ್ನು ಅವರೇ ತೀರ್ಮಾನಿಸಬೇಕು. ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಕೆಲವೆಡೆ ಅನ್ನದಾನ ಕಾರ್ಯಕ್ರಮ ಮಾಡುವ ಆಶಯವನ್ನು ಕೆಲವರು ವ್ಯಕ್ತಪಡಿಸಿದ್ದರು. ಆದರೆ ಇದು ಸರಿಯಾಗುವುದಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟಸಾಧ್ಯ ಎಂದರು.
ರೇವಣ್ಣಗೆ ಕ್ಲಾಸ್:
ಇನ್ನು ಇದೇ ಸಂದರ್ಭ ವಿಧಾನ ಪರಿಷತ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ತಲಾ ಎರಡು ಸೆಟ್ ನಾಮಪತ್ರ ವಿತರಿಸುತ್ತೇವೆ. ನಾಲ್ವರು ಸದಸ್ಯರು ಒಂದೊಂದು ಬಾರಿ ತೆರಳಬೇಕು. ಅಲ್ಪಸಂಖ್ಯಾತ ವಿಭಾಗದ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಿ ನಜೀರ್ ಅಹ್ಮದ್ ಜೊತೆ ಕಳಿಸಿಕೊಡಲಾಗುತ್ತದೆ ಎಂದಾಗ, ಮುಂದಿನ ಸಾಲಿನಲ್ಲಿ ಕುಳಿತಿದ್ದ ವಿಧಾನ ಪರಿಷತ್ ಸದಸ್ಯ ಹಾಗೂ ಮರು ಆಯ್ಕೆಯ ನಿರೀಕ್ಷೆಯಲ್ಲಿದ್ದ ಹೆಚ್.ಎಂ.ರೇವಣ್ಣ ಬೇರೆಯವರಿಗೂ ಅವಕಾಶ ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ತಕ್ಷಣ ತರಾಟೆಗೆ ತೆಗೆದುಕೊಂಡ ಡಿಕೆಶಿ, ನಮಗೆ ಗೊತ್ತು. ಯಾವ ರೀತಿ ಕಳಿಸಬೇಕು ಎಂಬ ಅರಿವು ನಮಗೆ ಇದೆ. ಮೊದಲ ಬ್ಯಾಚಿನಲ್ಲಿ ಅಲ್ಪಸಂಖ್ಯಾತ ನಾಯಕರು ಮಾತ್ರ ತೆರಳುತ್ತಾರೆ. ಎರಡನೇ ಬ್ಯಾಚಿನಲ್ಲಿ ಉಳಿದ ನಾಯಕರನ್ನ ಕಳಿಸಿಕೊಡುತ್ತೇವೆ ಎಂದರು.