ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಇಂದು ಜೆಡಿಎಸ್ ಮಹತ್ವದ ಸಭೆ ನಡೆಯಲಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಾಳೆ ಜೆಡಿಎಸ್ ಮಹತ್ವದ ಸಭೆ ನಡೆಯಲಿದ್ದು, ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸುವ ಸಂಬಂಧ ಹಾಗೂ ರಾಜ್ಯದಲ್ಲಿ ಮೈತ್ರಿ ಪಕ್ಷಗಳಲ್ಲಿನ ಗೊಂದಲದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ದೊಡ್ಡ ಮಟ್ಟದ ಆಪರೇಷನ್ ಕಮಲಕ್ಕೆ ರಾಜ್ಯ ಬಿಜೆಪಿ ಮುಂದಾಗಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಜೆಡಿಎಸ್, ಕಾಂಗ್ರೆಸ್ನಿಂದ 15 ಕ್ಕೂ ಹೆಚ್ಚು ಶಾಸಕರ ರಾಜೀನಾಮೆ ಕೊಡಿಸಲು ರಣತಂತ್ರ ರೂಪಿಸಲಾಗಿದೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿವೆ. ಈ ಎಲ್ಲ ಮಾಹಿತಿ ಪಡೆದಿರುವ ದೇವೇಗೌಡರು, ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಈ ಮಹತ್ವದ ಸಭೆ ಕರೆದಿದ್ದಾರಂತೆ.
ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಜೆಡಿಎಸ್ ಶಾಸಕರು, ಸಚಿವರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭೆ ಸದಸ್ಯರು, ಲೋಕಸಭೆ ಸದಸ್ಯರು ಹಾಗೂ ಜೆಡಿಎಸ್ ಮುಖಂಡರು ಭಾಗವಹಿಸಲಿದ್ದಾರೆ. ಲೋಕಸಭೆ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಜೆಡಿಎಸ್ಗೆ ಭಾರಿ ನಿರಾಶೆ ತಂದಿದೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ದೇವೇಗೌಡರು ಕಸರತ್ತು ನಡೆಸಿದ್ದು, ಸಭೆಯಲ್ಲಿ ಎಲ್ಲ ಶಾಸಕರು ಒಗ್ಗಟ್ಟಾಗಿ ಇರುವಂತೆ ದೊಡ್ಡಗೌಡರು ಸೂಚಿಸಲಿದ್ದಾರೆ ಎನ್ನಲಾಗ್ತಿದೆ.