ಬೆಂಗಳೂರು: ನಾಳೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಸರ್ಕಾರದ ಕೊನೆಯ ದಿನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ರಮಡ ರೆಸಾರ್ಟ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಎಲ್.ಪಿ ನಾಯಕ ಸಿದ್ದರಾಮಯ್ಯ, ಸ್ಪೀಕರ್, ಸಿ.ಎಂ. ಹೆಚ್.ಡಿ.ಕುಮಾರಸ್ವಾಮಿ ಸೋಮವಾರ ವಿಶ್ವಾಸ ಮತಯಾಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು.
ಮುಂಬೈನಲ್ಲಿರುವ 15 ಜನ ಶಾಸಕರು ಯಾವುದೇ ಕಾರಣಕ್ಕೂ ಶಾಸನಸಭೆಗೆ ಬರುವಂತೆ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿದೆ. ಇಂತಹ ಸಂದರ್ಭದಲ್ಲಿ ವಿಪ್ ಜಾರಿ ಮಾಡುವಂತಿಲ್ಲ. ಮಾಡಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹೀಗಿದ್ದರೂ ಕಾಲಹರಣ ಮಾಡುತ್ತಾ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಎಸ್ವೈ ದೂರಿದರು.
ತುಮಕೂರಿನಲ್ಲಿ ಕೆ.ಎನ್. ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಅದನ್ನ ರದ್ದುಗೊಳಿಸಿದ್ದಾರೆ. ಹೀಗೆ, ಬಹುಮತ ಇಲ್ಲದಿದ್ದರೂ ಅನೇಕ ಪ್ರಮುಖ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಮುಖ್ಯಮಂತ್ರಿಗೆ ರಾಜ್ಯಪಾಲರು ಮತ್ತೊಮ್ಮೆ ಪತ್ರ ಬರೆದು ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳದಂತೆ ಪತ್ರದ ಮೂಲಕ ತಿಳಿಸಿದ್ದಾರೆ ಎಂದರು.