ಬೆಂಗಳೂರು: ನಾಳೆ ಇಷ್ಟಲಿಂಗ ಪೂಜೆ ಮಾಡಲು ವೀರಶೈವ-ಲಿಂಗಾಯತ ಸಮುದಾಯದವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.
ವಿಶ್ವವೇ ಇಂದು ಕೊರೊನಾ ವೈರಸ್ ಭೀತಿಯಿಂದ ತತ್ತರಿಸಿ ಹೋಗಿದೆ. ಇಂದಿನವರೆಗೆ ವಿಶ್ವದಲ್ಲಿ ಈ ಸೋಂಕಿಗೆ ಒಳಗಾದವರ ಸಂಖ್ಯೆ 18 ಲಕ್ಷ ತಲುಪಿದ್ದು, 1 ಲಕ್ಷದ 8 ಸಾವಿರ ಜನ ಬಲಿಯಾಗಿದ್ದಾರೆ. ಇದಕ್ಕೆ ನಿರ್ದಿಷ್ಟವಾದ ಔಷಧ ಶೋಧನೆಯಾಗಿಲ್ಲ. ಲಸಿಕೆಯೂ ಇಲ್ಲ. ಹೀಗಾಗಿಯೇ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಇಷ್ಟಲಿಂಗ ಪೂಜೆ ಮತ್ತು ಪ್ರಾರ್ಥನೆ ನಮ್ಮ ನಿಮ್ಮೆಲ್ಲರನ್ನೂ ಕಾಪಾಡಲು ಸಾಧ್ಯ. ಇದಕ್ಕೆ ನಾವು ನೀವೆಲ್ಲರೂ ಇಷ್ಟಲಿಂಗ ಪೂಜೆಯ ಮೂಲಕ ಸರ್ವ ಶ್ರೇಷ್ಠನಾದ ಈಶ್ವರನನ್ನು ಪ್ರಾರ್ಥಿಸೋಣ ಎಂದಿದ್ದಾರೆ.
ಪಂಚ ಪೀಠಾಧೀಶ್ವರರು, ಮಠಾಧೀಶರರು, ಶಿವಾಚಾರ್ಯರು, ಹರಗುರು ಚರಮೂರ್ತಿಗಳು, ಸಮಾಜದ ಮುಖಂಡರು ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಸದ್ಭಕ್ತರಿಗೆ ನೀಡಿರುವ ಸೂಚನೆಯನ್ನ ಪಾಲಿಸೋಣ. ನಾಳೆ ಸಂಜೆ 7 ಗಂಟೆಗೆ ನಿಮ್ಮ ಮನೆಯಲ್ಲಿಯೇ/ಮಠದಲ್ಲಿಯೇ ಇಷ್ಟಲಿಂಗ ಪೂಜೆಯನ್ನು ಮಾಡುವುದರ ಮೂಲಕ ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟಲು ಪ್ರಾರ್ಥಿಸೋಣ. ದೇಶವೇ ಈಗ ದಿಗ್ಬಂಧನದಲ್ಲಿದೆ. ನಾಲ್ಕು ಗೋಡೆಗಳ ಮಧ್ಯೆಯೇ ಕಾಲ ಕಳೆಯುವಂಥ ಸ್ಥಿತಿ ಇಂದು ಎದುರಾಗಿದೆ. ಇಂತಹ ಅನೂಹ್ಯ ಸನ್ನಿವೇಶದಲ್ಲಿ ನಮ್ಮ ಆತ್ಮವಿಶ್ವಾಸ ಮತ್ತು ಆತ್ಮಸ್ಥೆರ್ಯವನ್ನು ಧ್ಯಾನ, ಪೂಜೆ ಮಾತ್ರ ಹೆಚ್ಚಿಸಲು ಸಾಧ್ಯ ಎಂದು ತಿಳಿಸಿದ್ದಾರೆ.
ಸಮಸ್ತ ವೀರಶೈವ-ಲಿಂಗಾಯತ ಸಮುದಾಯದವರು ತಪ್ಪದೇ ನಾಳೆ ಸಂಜೆ ಇಷ್ಟಲಿಂಗ ಪೂಜೆ ಮಾಡಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಾದಿ ಶರಣರು ಬಯಸಿದಂತೆ ಎಲ್ಲರಿಗೂ ಒಳ್ಳೆಯ ಆರೋಗ್ಯ ಕೊಡಲಿ ಎಂದು ಪ್ರಾರ್ಥಿಸೋಣ ಎಂದು ಮನವಿ ಮಾಡಿದ್ದಾರೆ.