ಬೆಂಗಳೂರು: ದೇಶಾದ್ಯಂತ ನಾಳೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬೆಂಗಳೂರಿನಲ್ಲೂ ಮುಷ್ಕರದ ಬಿಸಿ ತಟ್ಟಲಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಒಂದು ವೇಳೆ ಅಹಿತಕರ ಪರಿಸ್ಥಿತಿ ನಿರ್ಮಾಣವಾದ್ರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.
ಇನ್ನು, ಫ್ರೀಡಂಪಾರ್ಕ್ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ವ್ಯಾಪ್ತಿಯಲ್ಲಿದ್ದು, ಪಾರ್ಕ್ನಲ್ಲಿ ಅನೇಕ ಕಾರ್ಮಿಕರು ಸೇರಿ ಮುಷ್ಕರ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಡಿಸಿಪಿ ರಮೇಶ್ ನೇತೃತ್ವದಲ್ಲಿ ಎಸಿಪಿ, ಇನ್ಸ್ಪೆಕ್ಟರ್, ಪಿಎಸ್ಐ , ಎಎಸ್ಐ, ಕೆಎಸ್ಆರ್ಪಿ ತುಕಡಿ ಸೇರಿದಂತೆ ಸುಮಾರು 500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಕೇಂದ್ರ ವಿಭಾಗದಲ್ಲಿ ಡಿಸಿಪಿ ಚೇತನ್ ಸಿಂಗ್ ನೇತೃತ್ವದಲ್ಲಿ ಭದ್ರತೆ ವಹಿಸಲಾಗುವುದು. ವಿಧಾನಸೌಧ, ರಾಜಭವನ, ಮೆಜೆಸ್ಟಿಕ್, ಮೆಟ್ರೋ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ಡಿಪೋಗಳಿಗೂ ಹೆಚ್ವಿನ ಭದ್ರತೆ ವಹಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.