ಬೆಂಗಳೂರು: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್ಗೆ ಕರೆ ಕೊಟ್ಟಿವೆ.
ಕಳೆದ ನಾಲ್ಕು ತಿಂಗಳಿನಿಂದ ದೆಹಲಿಯ ಗಡಿಯಲ್ಲಿ ರೈತರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವಿನ ಹಲವು ಸುತ್ತಿನ ಮಾತುಕತೆ ವಿಫಲವಾಗಿವೆ. ಹೀಗಾಗಿ, ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಾಳೆ ಭಾರತ್ ಬಂದ್ಗೆ ಕರೆ ನೀಡಲಾಗಿದೆ. ನಾಳಿನ ಬಂದ್ಗೆ ರಾಜ್ಯದ ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ. ದೇಶದಾದ್ಯಂತ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಎಲ್ಲಾ ಸೇವೆಗಳನ್ನು ಬಂದ್ ಮಾಡಲು ಎಸ್ಕೆಎಂ ಕರೆ ನೀಡಿದೆ.
ದೇಶದಾದ್ಯಂತ ಎಲ್ಲಾ ಸಾರಿಗೆ, ಮಾರುಕಟ್ಟೆ ಮತ್ತು ಸಾರ್ವಜನಿಕ ಸ್ಥಳಗಳು ಬಂದ್ ಆಗಲಿವೆ ಎಂದು ರೈತ ನಾಯಕರು ತಿಳಿಸಿದ್ದಾರೆ. ಅನ್ನದಾತರಿಗೆ ಗೌರವ ಸೂಚಿಸಲು ಭಾರತ್ ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ ನಡೆಸಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಓದಿ : ನಾಳೆ 'ಭಾರತ್ ಬಂದ್': ರೈತ ಒಕ್ಕೂಟಗಳ ಕರೆಗೆ ವಿವಿಧ ಸಂಘಟನೆಗಳ ಬೆಂಬಲ
ನಾಳೆ ಬಂದ್ಗೆ ಕರೆ ಕೊಟ್ಟಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಸಂಘಟನೆ ಹಿಂದೆ ಸರಿದಿದೆ. ಯಾವುದೇ ತಯಾರಿ ಇಲ್ಲದೆ ಬಂದ್ ಮಾಡಲು ಸಾಧ್ಯವಿಲ್ಲ. ಬಂದ್ಗೆ ಇನ್ನು ಒಂದೇ ದಿನ ಬಾಕಿ ಇರೋದು, ಬಂದ್ ಮಾಡಿದರೆ ಯಶಸ್ವಿಯಾಗಲ್ಲ. ಮೊನ್ನೆ ಫ್ರೀಡಂ ಪಾಕ್ನಲ್ಲಿ ಯಾರೋ ಒಬ್ಬರು ಮಾರ್ಚ್ 26ರಂದು ಬಂದ್ ಮಾಡುತ್ತೇವೆ ಎಂದು ಫ್ಲೆಕ್ಸ್ ಹಿಡಿದುಕೊಂಡಿದ್ದರು. ಅದರಲ್ಲಿ ಏನಿದೆ ಎಂದು ನನಗೂ ಗೊತ್ತಾಗಿಲ್ಲ. ಮಾರ್ಚ್ 26ರಂದು ಭಾರತ್ ಬಂದ್ ದಿನ ನಾವು ತಟಸ್ಥವಾಗಿರುತ್ತೇವೆ. ಬಂದ್ ಮಾಡಿಕೊಳ್ಳುವವರು ಮಾಡಿಕೊಳ್ಳಲಿ ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ನಾಳೆ ಏನಿರುತ್ತೆ : ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್, ಮೆಟ್ರೋ, ಆಟೋ, ಓಲಾ-ಊಬರ್, ಖಾಸಗಿ ಬಸ್, ರೈಲ್ವೆ ಸಂಚಾರ ಎಂದಿನಂತೆ ಇರಲಿದೆ.
ಮಾರುಕಟ್ಟೆ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯ ಇಲ್ಲ. ಮೆಡಿಕಲ್ ಶಾಪ್ ಮತ್ತು ಹಾಲಿನ ಮಳಿಗೆಗಳು ಎಂದಿಂತೆ ತೆರಿದಿರುತ್ತವೆ. ಲಾರಿ ಮಾಲೀಕರಿಂದ ಬಂದ್ಗೆ ಬೆಂಬಲ ಇಲ್ಲ. ಹೀಗಾಗಿ ಎಂದಿನಂತೆ ಲಾರಿಗಳು ಸಂಚರಿಸಲಿವೆ.
ನಾಳೆ ಏನಿರಲ್ಲ: ರಾಷ್ಟ್ರೀಯ ಚಾಲಕರ ವೇದಿಕೆ ಮತ್ತು ನಮ್ಮ ಚಾಲಕರ ಟ್ರೇಡ್ ಯೂನಿಯನ್ ( ಟ್ಯಾಕ್ಸಿ) ಬಂದ್ಗೆ ಬೆಂಬಲ ನೀಡಿವೆ. ಹಾಗಾಗಿ ಏರ್ಪೋರ್ಟ್ ಟ್ಯಾಕ್ಸಿ ಸೇರಿದಂತೆ ಇತರ ಟ್ಯಾಕ್ಸಿ ವ್ಯವಸ್ಥೆಯಲ್ಲಿ ವ್ಯತ್ಯಯ ಆಗಬಹುದು.
ನಾಳೆ ಭಾರತ್ ಬಂದ್ಗೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಬೆಂಬಲ ನೀಡಿಲ್ಲ. ಬಂದ್ ಮಾಡದಂತೆ ತೀರ್ಮಾನ ಮಾಡಲಾಗಿದೆ. ಬಂದ್ ಬದಲು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ. ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ನಾಳೆ ಅಣಕು ಶವಯಾತ್ರೆ ಮಾಡಲಾಗುವುದು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಯುಕ್ತ ಕಿಸಾನ್ ಮೊರ್ಚಾ ಪ್ರತಿಭಟನೆಗೆ ಬೆಂಬಲ ನೀಡಲಿದೆ. ಹಲವಾರು ತಿಂಗಳಿಂದ ರಾಜ್ಯದಲ್ಲಿ ಮೂರು- ನಾಲ್ಕು ಬಂದ್ ಮಾಡಲಾಗಿದೆ. ನಾಳಿನ ಬಂದ್ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ನಮ್ಮ ರೈತ ಸಂಘಟನೆಗಳು ಯೋಜನೆ ತಯಾರಿಸಿಲ್ಲ. ಈ ಹಿನ್ನೆಲೆ ನಾಳೆ ಬಂದ್ ಬದಲಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಎಲ್ಲರೂ ಕೂಡ ಬೆಂಬಲ ಸೂಚಿಸಬೇಕೆಂದು ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.