ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಶೇ.50ರಷ್ಟು ರಿಯಾಯಿತಿ ದಂಡ ಪಾವತಿಗೆ ಇಂದು(ಶನಿವಾರ) ಕೊನೆ ದಿನವಾಗಿದ್ದು, ಫೆಬ್ರುವರಿ 11ರ ಮುನ್ನ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸವಾರರಿಗೆ ಈ ಆದೇಶ ಅನ್ವಯವಾಗಲಿದೆ.
ಸವಾರರು ಸದ್ಬಳಕೆ ಮಾಡಿಕೊಳ್ಳುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ರಾಜ್ಯ ಕಾನೂನು ಸೇವೆ ಪ್ರಾಧಿಕಾರ ಶಿಫಾರಸು ಮೇರೆಗೆ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಶೇ.50 ರಷ್ಟು ದಂಡ ಪಾವತಿಸುವ ಬಗ್ಗೆ ಆದೇಶ ಹೊರಡಿಸಿತ್ತು. ಮೊದಲ ಎರಡು ಬಾರಿ ಅವಕಾಶ ನೀಡಿದಾಗ ಸವಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಅನಂತರ ಜುಲೈ 11ರಿಂದ ಸೆ.9 ರವರೆಗೆ ಮೂರನೇ ಬಾರಿ ಅವಕಾಶ ನೀಡಿತ್ತು. ಇಂದು ಕೊನೆಯ ದಿನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಯಾಯಿತಿ ಅದೇಶದಿಂದ 8 ಕೋಟಿ ದಂಡ ಸಂಗ್ರಹ: ಶೇ.50 ರಷ್ಟು ದಂಡ ಪಾವತಿಗೆ ಆದೇಶ ಹೊರಡಿಸಿದ ಬಳಿಕ ವಾಹನ ಸವಾರರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕವೆಂಬಂತೆ 2,53,519 ಕೇಸ್ಗಳಲ್ಲಿ ಒಟ್ಟು 8,07,73,190 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಕಳೆದ ಜುಲೈನಲ್ಲಿ 3. 89 ಕೋಟಿ ಆಗಸ್ಟ್ನಲ್ಲಿ 2.82 ಕೋಟಿ ಹಾಗೂ ಸೆಪ್ಟೆಂಬರ್ 8 ರವರೆಗೆ 1 ಕೋಟಿ ಸೇರಿದಂತೆ ಒಟ್ಟು 8 ಕೋಟಿಗಿಂತ ಹೆಚ್ಚು ದಂಡ ಕಟ್ಟಿಸಿಕೊಳ್ಳಲಾಗಿದೆ.
ಮಂಗಳೂರಿನಲ್ಲಿ ಸಂಚಾರ ನಿಮಯ ಉಲ್ಲಂಘಿಸಿದ ಚಾಲಕರ ಡಿಎಲ್ ರದ್ದುಗೆ ಪ್ರಸ್ತಾವನೆ: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವ ಮತ್ತು ಸಂಚಾರ ನಿಯಮ ಉಲ್ಲಂಘಿಸಿರುವ 222 ವಾಹನ ಚಾಲಕರ ಚಾಲನಾ ಪರವಾನಗಿ (ಡಿಎಲ್) ರದ್ದುಗೊಳಿಸಲು ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಿಂದ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಪ್ರಸ್ತಾವನೆ ಕಳುಹಿಸಲಾಗಿತ್ತು.
ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿರುವ 113 ಚಾಲಕರ ಡಿಎಲ್ ರದ್ದತಿ, ಅದೇ ರೀತಿ ಮದ್ಯಸೇವಿಸಿ ಚಾಲನೆ - 1, ಸರಕು ಸಾಗಾಟದ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ 16, ವಾಹನ ಸಂಚಾರದಲ್ಲಿರುವಾಗಲೇ ಮೊಬೈಲ್ ಬಳಕೆ - 4, ಕೆಂಪು ಸಿಗ್ನಲ್ ಜಂಪಿಂಗ್ - 5, ಕಮರ್ಷಿಯಲ್ ವಾಹನಗಳಲ್ಲಿ ಅತಿ ಹೆಚ್ಚಿನ ಪ್ರಯಾಣಿಕರ ಸಾಗಾಟ - 4, ದ್ವಿಚಕ್ರ ವಾಹನಗಳಲ್ಲಿ ಮೂವರು ಪ್ರಯಾಣ - 3, ಹೆಲ್ಮೆಟ್ ಇಲ್ಲದೆ ಸಂಚಾರ - 59, ಸೀಟ್ ಬೆಲ್ಟ್‌ರಹಿತ ಪ್ರಯಾಣ - 17 ಪ್ರಕರಣಗಳಲ್ಲಿ ಡಿಎಲ್ ರದ್ದು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.