ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟಿ ಸುಮಲತಾ ವಿರುದ್ಧ ಪರಾಭವಗೊಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರು ಇಂದು ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ನಿಖಿಲ್ ಅವರಿಗೆ ಜೆಡಿಎಸ್ ಯುವ ಘಟಕದ ಸಾರಥ್ಯ ನೀಡಲು ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಖಚಿತತೆ ಇಲ್ಲ. ಇದರ ಕುರಿತು ಸಿಎಂ ಕುಮಾರಸ್ವಾಮಿ ಅವರ ಜೊತೆಗೂ ವಿಶ್ವನಾಥ್ ಅವರು ಚರ್ಚಿಸಿದ್ದಾರೆ. ಸದ್ಯ ಯುವ ಘಟಕದ ಅಧ್ಯಕ್ಷರಾಗಿರುವ ಮಧು ಬಂಗಾರಪ್ಪ ಅವರನ್ನು ಪಕ್ಷದ ಮುಖ್ಯ ಘಟಕಕ್ಕೆ ಕರೆತಂದು, ಅಂಗ ಸಂಸ್ಥೆಗೆ ನಿಖಲ್ ಅವರನ್ನು ನೇಮಿಸುವ ಆಲೋಚನೆಯನ್ನು ವರಿಷ್ಠರು ಮಾಡಿದ್ದಾರೆ ಎನ್ನಲಾಗಿದೆ.
ಹಿರಿಯ ನಾಯಕರು, ರಾಜಕಾರಣದ ಒಳ-ಹೊರಗನ್ನು ಚೆನ್ನಾಗಿ ತಿಳಿದುಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರನ್ನು ಇವತ್ತು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿ, ಅವರಿಂದ ಮಾರ್ಗದರ್ಶನ ಪಡೆದುಕೊಂಡಿದ್ದೀನಿ. ರಾಜಕಾರಣದಲ್ಲಿ ಈಗ ತಾನೆ ಕಾಲಿಡುತ್ತಿರುವ ನನ್ನಂಥ ಯುವ ಕಾರ್ಯಕರ್ತರಿಗೆ, ಪಕ್ಷದ ಎಲ್ಲ ಹಿರಿಯ ನಾಯಕರ ಸಲಹೆ, ಸೂಚನೆಗಳು, ಆಶೀರ್ವಾದ, ಮಾರ್ಗದರ್ಶನ ಅತ್ಯವಶ್ಯಕ ಎಂದಿದ್ದಾರೆ ನಿಖಿಲ್‌ಕುಮಾರಸ್ವಾಮಿ.
ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರತಿನಿತ್ಯ ಸಾವಿರಾರು ಜನರನ್ನು ಭೇಟಿ ಮಾಡಿದ್ದೇನೆ. ಅವರ ಕುಂದು-ಕೊರತೆಗಳನ್ನು, ಅವರ ನಿರೀಕ್ಷೆಗಳನ್ನು ತಿಳಿಯುವ ಪ್ರಯತ್ನ ಮಾಡಿದ್ದೇನೆ. ಇದರಿಂದ ನನಗೆ ಸಿಕ್ಕ ಅನುಭವ ನನ್ನಲ್ಲಿರುವ ರಾಜಕಾರಣಿಯನ್ನು ರೂಪಿಸುತ್ತಿರುವುದು ಮಾತ್ರವಲ್ಲ, ಸಾರ್ವಜನಿಕ ಜೀವನದ ವಾಸ್ತವ ಮುಖವನ್ನು ಪರಿಚಯ ಮಾಡಿಕೊಟ್ಟಿದೆ. ಚುನಾವಣೆಯಲ್ಲಿ ಸೋಲು-ಗೆಲುವುಗಳು ಇದ್ದದ್ದೆ. ಇದರ ನಂತರ ನಾನು ಹೇಗೆ ಮುಂದುವರಿಯಬೇಕು. ಜನರು ನನ್ನ ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ-ವಿಶ್ವಾಸಗಳನ್ನು ಹೇಗೆ ಉಳಿಸಿಕೊಳ್ಳಬೇಕು. ಅವರ ನಿರೀಕ್ಷೆಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.