ಬೆಂಗಳೂರು: ಕೊರೊನಾ ಭೀತಿ ನಡುವೆಯೇ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿ ಮತ್ತು ಹುಬ್ಬಳ್ಳಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಗಾವಿಯಲ್ಲಿ ವಿಧಾಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ವಿವಾಹ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ತೆರಳುತ್ತಿದ್ದಾರೆ. ಮದುವೆ ಸಮಾರಂಭ ಮುಗಿಸಿದ ನಂತರ ಬೆಳಗಾವಿಯಿಂದ ಹುಬ್ಬಳ್ಳಿಗೆ ತೆರಳಲಿರುವ ಸಿಎಂ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಡೋಜ ಪಾಟೀಲ್ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಲಿದ್ದಾರೆ.
ಬೆಳಗಾವಿ ಮತ್ತು ಹುಬ್ಬಳ್ಳಿ ಪ್ರವಾಸ ಮುಗಿಸಿದ ಬಳಿಕ ಇಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈ ಮೊದಲು ಕೂರೊನಾ ಹಿನ್ನೆಲೆಯಲ್ಲಿ ಸಿಎಂ ಜಿಲ್ಲಾ ಪ್ರವಾಸ ಮೊಟಕುಗೊಳಿಸಿದ್ದರು. ರಾಜ್ಯದಲ್ಲಿ ಒಂದು ವಾರ ಸಭೆ ಸಮಾರಂಭ ನಡೆಸದಂತೆ ಪ್ರಕಟಿಸುವ ಕುರಿತ ಸುದ್ದಿಗೋಷ್ಟಿಯಲ್ಲಿ ನನ್ನ ಜಿಲ್ಲಾ ಪ್ರವಾಸ ಮೊಟಕುಗೊಳಿಸುತ್ತಿದ್ದೇನೆ ಎಂದು ಸ್ವತಃ ಸಿಎಂ ಹೇಳಿಕೆ ಕೊಟ್ಟಿದ್ದರು.
ಸಭೆ ಸಮಾರಂಭ ಮತ್ತು ಮದುವೆ ಕಾರ್ಯಕ್ರಮಗಳಿಗೆ ಹೋಗುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದ ಸಿಎಂ ಇದೀಗ ಅವರೇ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.