ಬೆಂಗಳೂರು: ಮಹಾರಾಷ್ಟ್ರದ ನಂಜು ಕರುನಾಡಿನಲ್ಲಿ ಜೋರಾಗಿಯೇ ನಾಟಿದೆ. ಇಂದು ಒಂದೇ ದಿನ ನಾಡಿನಾದ್ಯಂತ 388 ಹೊಸ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆ ಆಗಿದೆ. ಈವರೆಗೆ 1,403 ಮಂದಿ ಡಿಸ್ಜಾರ್ಜ್ ಆಗಿದ್ದು, 2,339 ಸಕ್ರಿಯ ಪ್ರಕರಣಗಳು ಇವೆ. 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ 367 ಸೋಂಕಿತರು ಹೊರ ರಾಜ್ಯದಿಂದ ಬಂದವರೇ ಆಗಿದ್ದಾರೆ.
ರಾಜ್ಯದಲ್ಲಿ ಮೊದಲ ಸ್ಥಾನವನ್ನು ಬೆಂಗಳೂರಿನಿಂದ ಉಡುಪಿ ಪಡೆದುಕೊಂಡಿದೆ. ಮೈಸೂರಿನ ಜಾಗಕ್ಕೆ ಇದೀಗ ಕಲಬುರಗಿ ಕಾಲಿಟ್ಟಿದೆ. ಒಂದೇ ದಿನ ಉಡುಪಿಯಲ್ಲಿ 150, ಕಲಬುರಗಿ 100 ಕೇಸ್ಗಳು ಪತ್ತೆಯಾಗಿವೆ. ಪತ್ತೆಯಾಗಿರುವ ಪ್ರಕರಣಗಳಲ್ಲಿ ಮಹಾರಾಷ್ಟ್ರದ ನಂಜು ಆವರಿಸಿದ್ದು ಈ ಸಂಖ್ಯೆ ಇನ್ನು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಉಳಿದಂತೆ 5 ಜನರ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ.
ರಾಜ್ಯದಲ್ಲಿ 32,239 ಜನರನ್ನು ನಿಗಾದಲ್ಲಿ ಇಡಲಾಗಿದೆ. 17,503 ಪ್ರಥಮ ಸಂಪರ್ಕಿತರು ಹಾಗೂ 14,736 ದ್ವಿತೀಯ ಸಂಪರ್ಕಿತ ವ್ಯಕ್ತಿಗಳಾಗಿದ್ದಾರೆ. ಇಂದು ಒಟ್ಟು 14,812 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 13,915 ಮಾದರಿಗಳು ನೆಗೆಟಿವ್ ಬಂದಿವೆ.
ಸಚಿವ ಸುರೇಶ್ ಕುಮಾರ್ ಮುಕ್ತರಾದ ಮೇಲೆ ಆರೋಗ್ಯ ಇಲಾಖೆಗೆ ಅನಾರೋಗ್ಯ?
ಕೊರೊನಾದಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಬೇಜವಾಬ್ದಾರಿತನ ತೋರುತ್ತಿದೆ. ಈ ಮುನ್ನ ಸಚಿವ ಸುರೇಶ್ ಕುಮಾರ್ ನೇತೃತ್ವ ವಹಿಸಿದ್ದಾಗ ದಿನಕ್ಕೆ ಎರಡು ಹೆಲ್ತ್ ಬುಲೆಟಿನ್ ರಿಲೀಸ್ ಮಾಡುತ್ತಿದ್ದ ಇಲಾಖೆ, ನಂತರ ಸುರೇಶ್ ಕುಮಾರ್ ಮುಕ್ತರಾದ ಮೇಲೆ ಸಂಜೆ ವೇಳೆ ಒಂದೇ ಬುಲೆಟಿನ್ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಸಂಜೆ 5 ಗಂಟೆಗೆ ಬಿಡುಗಡೆಗೊಳ್ಳುತ್ತಿದ್ದ ಬುಲೆಟಿನ್, ಹಂತ ಹಂತವಾಗಿ 6ಕ್ಕೆ ನಂತರ 7ಕ್ಕೆ ಇಂದು ಬರೋಬ್ಬರಿ 3 ಗಂಟೆ ತಡವಾಗಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.
ಬುಲೆಟಿನ್ ರೆಡಿ ಮಾಡುವುದಕ್ಕೆ ಐಎಎಸ್ ಅಧಿಕಾರಿಗಳ ತಂಡವೇ ಇದೆ. ಇದಕ್ಕೊಬ್ಬರು ಬುಲೆಟಿನ್ ಇನ್ಚಾರ್ಚ್ ಕೂಡ ಇದ್ದಾರೆ. ಇಷ್ಟೆಲ್ಲಾ ಇದ್ದರೂ ಹೆಲ್ತ್ ಬುಲೆಟಿನ್ ರಿಲೀಸ್ ಮಾತ್ರ ದಿನೇ ದಿನೆ ತಡವಾಗುತ್ತಿದೆ.