ಬೆಂಗಳೂರು: ಒಂದು ವಾರದಿಂದ ಖಾತೆಯಿಲ್ಲದೆ ಕಾರ್ಯ ನಿರ್ವಹಿಸಿದ್ದ ನೂತನ ಸಚಿವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಾವೇ ಪ್ರಕಟಿಸಿದಂತೆ ಇಂದು ಖಾತೆ ಹಂಚಿಕೆ ಮಾಡಲಿದ್ದಾರೆ.
ಖಾತೆಗಳ ಜತೆಗೆ ಹೈಕಮಾಂಡ್ ಸಲಹೆಯಂತೆ ಉಪಮುಖ್ಯಮಂತ್ರಿ ಹುದ್ದೆಯನ್ನೂ ಸಚಿವರಿಗೆ ನೀಡಲಿದ್ದಾರೆ. ಸಚಿವರಾದ ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ ಮತ್ತು ಲಕ್ಷಣ್ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಗಳಿವೆ. ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಶ್ರೀರಾಮುಲು ಅವರು ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇವರನ್ನು ಹೊರತುಪಡಿಸಿ ಬೇರೆಯವರಿಗೆ ನೀಡಿದರೆ ಅಸಮಾಧಾನ ಉಂಟಾಗಲಿದೆ ಎಂಬ ಆತಂಕ ಬಿ ಎಸ್ವೈ ಅವರದ್ದಾಗಿದೆ.
ಭವಿಷ್ಯದಲ್ಲಿ ಬಿಜೆಪಿ ಸೇರಲಿರುವ ಅನರ್ಹ ಶಾಸಕರಿಗೆ ಹಂಚಿಕೆ ಮಾಡಲಾಗುವ ಖಾತೆಗಳನ್ನು ಮುಖ್ಯಮಂತ್ರಿ ಅವರು ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ. ಉಪಮುಖ್ಯಮಂತ್ರಿ ಆಗಲಿರುವ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಬೆಂಗಳೂರು ನಗರಾಭಿವೃದ್ಧಿ, ಗೋವಿಂದ ಕಾರಜೋಳ ಅವರಿಗೆ ಗ್ರಾಮೀಣಾಭಿವೃದ್ಧಿ, ಲಕ್ಷ್ಮಣ ಸವದಿ ಅವರಿಗೆ ಸಹಕಾರ ಖಾತೆ ದೊರೆಯುವ ಸಾಧ್ಯತೆಗಳಿವೆ.
ಹಿರಿಯ ಸಚಿವ ಆರ್. ಅಶೋಕ್ ಬೆಂಗಳೂರು ಅಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದು, ಅವರಿಗೆ ಈ ಖಾತೆ ಸಿಗುವುದು ಅನುಮಾನ. ಇಂಧನ ಅಥವಾ ಆರೋಗ್ಯ ಮತ್ತು ಸಾರಿಗೆ ಖಾತೆ ಸಿಗುವ ಸಂಭವ ಇದೆ ಎಂದು ಹೇಳಲಾಗ್ತಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಂದಾಯ ಖಾತೆ, ಕೆ.ಎಸ್ ಈಶ್ವರಪ್ಪ ನವರು ಗೃಹ ಖಾತೆ, ಶ್ರೀರಾಮುಲು- ಇಂಧನ ಖಾತೆ, ಬಸವರಾಜ ಬೊಮ್ಮಾಯಿ - ಜಲಸಂಪನ್ಮೂಲ, ವಿ. ಸೋಮಣ್ಣ ಕಂದಾಯ ಖಾತೆಯ ಆಕಾಂಕ್ಷಿಗಳಾಗಿದ್ದಾರೆ. ಹಣಕಾಸು, ಅಬಕಾರಿ, ಗಣಿಗಾರಿಕೆ, ಪ್ರಾಥಮಿಕ ಶಿಕ್ಷಣ, ಆಡಳಿತ ಸುಧಾರಣೆ ಸೇರಿದಂತೆ ಸುಮಾರು 15 ಖಾತೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.