ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಪಡಿಸಿದೆ. ಆದ್ರೆ ಇದು ಬಿಜೆಪಿ - ಕಾಂಗ್ರೆಸ್ ನಡುವೆ ವಾಗ್ವಾದ, ಚರ್ಚೆಗೆ ವೇದಿಕೆಯಾಗಿ ಪರಿಣಮಿಸಿದೆ. ಇದೇ ನ.10 ರಂದು ಕಾಂಗ್ರೆಸ್ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧವೆಂದು ಹೇಳಿದ್ದಾರೆ. ಆದ್ರೆ ಸರ್ಕಾರ ಮಾತ್ರ ಟಿಪ್ಪು ಜಯಂತಿ ಆಚರಿಸದಿರಲು ನಿರ್ಧರಿಸಿದೆ.
ಸರ್ಕಾರ ಮತ್ತು ಪ್ರತಿಪಕ್ಷದ ಕೆಸರೆರಚಾಟದ ಮಧ್ಯೆ ಭದ್ರತೆ ದೃಷ್ಟಿಯಿಂದ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆಯೋ ಅದರ ಆಧಾರದ ಮೇಲೆ ಭದ್ರತೆ ನಿಯೋಜಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.
ನಗರದಲ್ಲಿ ಮಾಧ್ಯಮದವರೊಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ನ.10ರಂದು ಮುಸ್ಲಿಂಮರು ಈದ್ ಮಿಲಾದ್ ಹಬ್ಬವನ್ನ ಆಚರಿಸುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಈದ್ ಮಿಲಾದ್ ದಿನ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿ ಮುಂಜಾಗೃತ ಕ್ರಮ ತೆಗೆದುಕೊಂಡಿದ್ದೇವೆ. ಅಲ್ಲದೆ, ಮೆರವಣಿಗೆ ನಡೆಯುವ ಅಧಿಯಲ್ಲಿ ಕಿಡಿಗೇಡಿಗಳು ಯಾವುದೇ ಕೃತ್ಯವೆಸಗಬಾರದು ಎನ್ನುವ ನಿಟ್ಟಿನಲ್ಲಿ 144 ಸೆಕ್ಷನ್ ಹಾಕಿ ಬೆಳಗ್ಗೆ 6 ರಿಂದ ಮಧ್ಯರಾತ್ರಿ 1 ರವರೆಗೆ ಎಲ್ಲಾ ವೈನ್ ಶಾಪ್, ಪಬ್‌ಗಳನ್ನ ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಇನ್ನು, ಟಿಪ್ಪು ಜಯಂತಿ ಆಚರಣೆ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು, ಸರ್ಕಾರ ನಿರ್ಧಾರದ ಮೇಲೆ ನಾವು ನಗರದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದರು.