ಬೆಂಗಳೂರು: ಶಿವಾನಂದ ವೃತ್ತದ ಸಮೀಪವಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದಲ್ಲಿ ಇಂದು ಟಿಪ್ಪು ಜಯಂತಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಇ.ತುಕಾರಾಂ, ಜಮೀರ್ ಅಹ್ಮದ್ ಖಾನ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಭಾಗವಹಿಸಿದ್ದರು.
ಸಮಾರಂಭದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ(Siddaramaiah), ಎಲ್ಲರಿಗೂ ಟಿಪ್ಪು ಜಯಂತಿಯ ಶುಭಾಶಯಗಳು. ಟಿಪ್ಪು ಮೈಸೂರು ರಾಜ್ಯದ ರಾಜನಾಗಿದ್ದವರು. ಅವರು ತಂದೆ ಕೂಡ ರಾಜನಾಗಿದ್ದವರು. ಬಿಜೆಪಿಯವರು ಟಿಪ್ಪುವನ್ನು ಮತಾಂಧ ಅಂತ ಹೇಳಿದರು. ಅವರು ಯಾವತ್ತೂ ಮತಾಂಧ ಆಗಿರಲಿಲ್ಲ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು ಎಂದರು.
ಮೂರನೇ ಮಹಾಯುದ್ದದಲ್ಲಿ ಟಿಪ್ಪು ನಮ್ಮವರ ಕುತಂತ್ರದಿಂದ ಸೋಲ್ತಾರೆ. ಭಾರತೀಯರೇ ಬ್ರಿಟಿಷರಿಗೆ ಸಹಾಯ ಮಾಡುತ್ತಾರೆ. ಹಾಗಾಗಿ ಟಿಪ್ಪು ಸೋಲುತ್ತಾರೆ. ಯುದ್ದಕ್ಕೆ ಖರ್ಚಾಗಿದ್ದ ದುಡ್ಡು ಕೊಡಬೇಕೆಂದು ಟಿಪ್ಪು ಮೇಲೆ ಭಾರ ಹೊರಿಸಲಾಗುತ್ತದೆ. ಆ ಸಮಯದಲ್ಲಿ ಅವರ ಮಕ್ಕಳನ್ನು ಅಡ ಇಡುತ್ತಾರೆ. ನಮ್ಮ ಸರ್ಕಾರ ಟಿಪ್ಪು ಜಯಂತಿ ಮಾಡಿದ್ದಕ್ಕೆ ಹೆಮ್ಮೆ ಪಡುತ್ತೇವೆ. ಯುದ್ದ ಮಾಡುತ್ತಿರುವಾಗಲೇ ಟಿಪ್ಪು ಸಾವನ್ನಪ್ಪಿದರು. ಅವರ ತ್ಯಾಗಕ್ಕೆ ಜಯಂತಿ ಮಾಡಿದರೆ ಏನು ತಪ್ಪು? ಆರ್ಎಸ್ಎಸ್ನವರಿಗೆ ಕಾಮಾಲೆ ಕಣ್ಣು. ಅವರು ವಿರೋಧ ಮಾಡುತ್ತಾರೆ. ಕೆಜೆಪಿ ಮಾಡಿದಾಗ ಬಿಎಸ್‌ವೈ, ಜಗದೀಶ್ ಶೆಟ್ಟರ್, ಅಶೋಕ್ ಟಿಪ್ಪು ಖಡ್ಗ ಹಿಡಿದಿದ್ದರು ಎಂದರು.
ಬಿಜೆಪಿಗರಿಗೆ ಒಂದೇ ನಾಲಿಗೆ ಇಲ್ಲ. ಎರಡೆರಡು ನಾಲಿಗೆ ಬಿಜೆಪಿಗರಿಗಿದೆ. ನಮಗೆ ಒಂದೇ ನಾಲಿಗೆ ಇದೆ. ಹಾಗಾಗಿ ಒಂದೇ ಮಾತನಾಡುತ್ತೇವೆ. ಕನ್ನಂಬಾಡಿ ಕಟ್ಟೆಗೆ ಅಡಿಪಾಯ ಹಾಕಿದ್ದೇ ಟಿಪ್ಪು. ವಿದೇಶಿ ವ್ಯಾಪಾರ ಕುದುರಿಸಿದ್ದೇ ಟಿಪ್ಪು. ಟಿಪ್ಪು ಇಸ್ ಸೆಕ್ಯುಲರ್ ಕಿಂಗ್. ಯಾರೇ ಬಂದ್ರೂ ನಾನು ವಾದ ಮಾಡಲು ಸಿದ್ದ. ಒಬ್ಬೇ ಒಬ್ಬ ಆರ್ಎಸ್ಎಸ್ನವರು ಸ್ವಾತಂತ್ರ ಹೋರಾಟದಲ್ಲಿ ಸತ್ತಿಲ್ಲ. ನಮಗೆ ಹೇಳ್ತಾರೆ ದೇಶ ಭಕ್ತಿ ಬಗ್ಗೆ ಎಂದು ಬಿಜೆಪಿ, ಆರ್ಎಸ್ಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಿಟ್ ಕಾಯಿನ್ ಪ್ರಕರಣ ಪ್ರಸ್ತಾಪ :
ಬಿಟ್ ಕಾಯಿನ್ ಪ್ರಕರಣ ಕುರಿತು ಮಾತನಾಡಿ, ಹಗರಣದಲ್ಲಿ ಯಾರೇ ಭಾಗಿಯಾಗಿರಲಿ. ಬಿಜೆಪಿ ಅವರೇ ಆಗಲಿ ,ಕಾಂಗ್ರೆಸ್ನವರೇ ಅಗಲಿ ಮೊದಲು ಕೇಸ್ ಬುಕ್ ಮಾಡಲಿ. ಹೆಸರು ಹೇಳಲಿ, ಸರ್ಕಾರ ಅವರದ್ದು. ತಪ್ಪಿಸಿಕೊಳ್ಳಲು ಎಸ್ಕೇಪ್ ಹೇಳಿಕೆ ನೀಡಬಾರದು. ಹೆಸರು ಹೇಳಲು ಆಗಿಲ್ಲ ಅಂದ್ರೆ ಸರ್ಕಾರ ಬಿಟ್ಟು ಕೊಡಲಿ. ನಂತರ ನಾವು ಹೇಳುತ್ತೇವೆ.
ಬಸವರಾಜ ಬೊಮ್ಮಾಯಿ ಈ ರೀತಿ ಮಾತನಾಡುವುದು ನೋಡಿದ್ರೆ ನನಗೆ ಅನುಮಾನ ಬರುತ್ತದೆ. ಅವರೇ ಸಿಕ್ಕಿಹಾಕಿಕೊಂಡಿರುವ ಹಾಗೆೇ ನಡೆದುಕೊಳ್ಳುತ್ತಿದ್ದಾರೆ. ಆದರೆ ನಾನು ಎಲ್ಲೂ ಬೊಮ್ಮಾಯಿ ಅವರ ಹೆಸರು ಹೇಳಿಲ್ಲ. ಆದರೂ ಅವರ ಹೇಳಿಕೆಗಳು ನೋಡುತ್ತಿದ್ದರೇ ಅನುಮಾನ ಬರ್ತಿದೆ. ಕಳ್ಳನ ತರಹ ಹೆದರಿಕೊಳ್ಳುತ್ತಿರುವುದು ನೋಡಿದ್ರೆ ನನಗೂ ಯಾಕೋ ಅನುಮಾನ ಬರುತ್ತಿದೆ. ಮೊದಲು ತನಿಖೆ ಮಾಡಲಿ, ಯಾರದೆ ಹೆಸರು ಅದರಲ್ಲಿ ಬರಲಿ. ಕಾಂಗ್ರೆಸ್ ನಾಯಕರ ಹೆಸರು ಇದ್ರೆ ಕೂಡ ಹೇಳಲಿ. ನಾವು ಬೇಡ ಅಂತ ಹೇಳಿಲ್ಲ ಎಂದರು.
ಸಚಿನ್ ಮಾಮನಿ ಪ್ರಧಾನಿಗೆ ಪತ್ರ ಬರೆದ ವಿಚಾರ ಮಾತನಾಡಿ, ಪತ್ರದಲ್ಲಿ ಸಿಎಂ ಬೊಮ್ಮಾಯಿ, ಕಟೀಲ್, ನಲಪಾಡ್, ವಿಜಯೇಂದ್ರ ಹಾಗೂ ಪೊಲೀಸ್ ಅಧಿಕಾರಿಗಳಾದ ಸಂದೀಪ್ ಪಾಟೀಲ್, ಭಾಸ್ಕರ್ ರಾವ್ ಇದ್ದಾರೆ ಎಂಬ ವಿಚಾರ ಗೊತ್ತಿಲ್ಲ. ಸಚಿನ್ ಮಾಮನಿ ಪತ್ರ ನಾನು ಓದಿಲ್ಲ. ಆ ಪತ್ರ ನನಗೆ ಕಳುಹಿಸಿ, ಓದಿ ನಾನು ಮಾತನಾಡುತ್ತೇನೆ ಎಂದು ಹೇಳಿದರು.