ಬೆಂಗಳೂರು: ಆಹಾರಪ್ರಿಯರು ಸಂಭ್ರಮಿಸುವ ದೇಶ, ವಿದೇಶಗಳ ಭಿನ್ನ, ವಿಭಿನ್ನ ಖಾದ್ಯಗಳನ್ನು ಸವಿದು ಸಂತೃಪ್ತರಾಗಲು ಐ ನೆಟ್ ವರ್ತಿಂಗ್ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಅಕ್ಟೋಬರ್ 27 ರಿಂದ ಮೂರು ದಿನಗಳ ಕಾಲ ಅತಿ ದೊಡ್ಡ ಸಸ್ಯಾಹಾರಿ ಆಹಾರ ಮೇಳ 'ತಿಂಡಿಪೋತರ ಹಬ್ಬ 2023' ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಡಿ.ನರೇಶ್ ಬಾಬು ಹೇಳಿದ್ದಾರೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಂಡಹಳ್ಳಿಯ ಪಂತರಪಾಳ್ಯದ ನಂದಿ ಲಿಂಕ್ ಮೈದಾನದಲ್ಲಿ ಅಕ್ಟೋಬರ್ 27, 28 ಮತ್ತು 29 ರಂದು ಹಿಂದೆಂದೂ ಕಂಡು ಕೇಳರಿಯದ, ರುಚಿ ನೋಡದ ತಿಂಡಿ, ತಿನಿಸುಗಳ ಆಹಾರೋತ್ಸವದ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ. ಕೇವಲ ಸಸ್ಯಾಹಾರಿ ಭಕ್ಷ್ಯ ಭೋಜನಗಳ ಮಳಿಗೆಗಳಿರಲಿವೆ. 600ಕ್ಕೂ ಹೆಚ್ಚು ಬಗೆಯ ವಿವಿಧ ಆಹಾರ ಖಾದ್ಯಗಳನ್ನು ಇಲ್ಲಿ ಸವಿಯಬಹುದು ಎಂದು ಮಾಹಿತಿ ನೀಡಿದರು.
ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಮಾತನಾಡಿ, ನಂದಿ ಲಿಂಕ್ ಮೈದಾನದಲ್ಲಿ 80ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಸಾವಿರಕ್ಕೂ ಅಧಿಕ ಬಾಣಸಿಗರ ಸಸ್ಯಾಹಾರಿ ಖಾದ್ಯಗಳ ತಯಾರಿಕೆಯ ಕೈಚಳಕ ವೀಕ್ಷಿಸಿ, ಸವಿಯಲು ಇದು ಸುರ್ವಣಾವಕಾಶ. ಆಹಾರಪ್ರಿಯರನ್ನು ಆಹಾರೋತ್ಸವವು ಪುಳಕಿತಗೊಳಿಸಲಿದೆ. ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಉಣಬಡಿಸುವ, ಕೆಲ ಮಳಿಗೆಗಳಲ್ಲಿ ಸಿದ್ಧಪಡಿಸಿ ಪ್ಯಾಕ್ ಮಾಡಿದ ಆಹಾರವನ್ನು ಸಹ ಗ್ರಾಹಕರಿಗೆ ವಿತರಿಸಲಾಗುವುದು. ಮೂರು ದಿನಗಳ ಈ ಹಬ್ಬದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕಾರ್ಯಕ್ರಮದ ಆಯೋಜಕ ಡಿ.ಪ್ರಶಾಂತ್ ಮಾತನಾಡಿ, ಇದೊಂದು ಪರಿಸರಸ್ನೇಹಿ ಮತ್ತು ಶುಚಿತ್ವಕ್ಕೆ ಒತ್ತು ನೀಡುವ ಹಬ್ಬ. ಮೇಳಕ್ಕೆ ಆಗಮಿಸುವವರಿಗೆ ಹಾಡು, ಕುಣಿತ, ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಾರಾಂತ್ಯದಲ್ಲಿ ಇಷ್ಟವಾಗುವ ಆಹಾರವನ್ನು ಸೇವಿಸಿ ಮೋಜು-ಮಸ್ತಿಯಲ್ಲಿ ತೊಡಗಲು ಬೆಂಗಳೂರು ನಾಗರಿಗೆ ಇದು ಸುವರ್ಣಾವಕಾಶ. ಸಾಂಪ್ರಾದಾಯಿಕ ಆಹಾರ, ಉತ್ತರ, ದಕ್ಷಿಣ ಭಾರತ, ಸಾಂಪ್ರದಾಯಿಕ, ದೇಶಿ ಅಡುಗೆಗಳ ರುಚಿ ನೋಡಬಹುದು. ಆರೋಗ್ಯಕ್ಕೆ ಪೂರಕವಾದ ಪೌಷ್ಟಿಕ ಆಹಾರವಷ್ಟೇ ಅಲ್ಲದೇ ವಿದೇಶಗಳ ತಿಂಡಿ, ತಿನಿಸುಗಳಿಗೂ ಪ್ರತ್ಯೇಕ ಮಳಿಗೆ ತೆರೆಯಲಾಗಿದೆ ಎಂದು ಹೇಳಿದರು. ಕಾರ್ ಪಾರ್ಕಿಂಗ್ಗೆ ಉತ್ತಮ ವ್ಯವಸ್ಥೆಯನ್ನು ಮಾಡಲಾಗಿದ್ದು, ಆಹಾರಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹಾವೇರಿಯ ಸವಣೂರು ಖಾರ ಸಖತ್ ಫೇಮಸ್, ನೀವೂ ಒಮ್ಮೆ ರುಚಿ ನೋಡಿ