ಬೆಂಗಳೂರು: ಮೆಟ್ರೋ ರೈಲು ಕಾಮಗಾರಿ, ರಸ್ತೆ ವಿಸ್ತರಣೆ , ಹೆದ್ದಾರಿ ಅಭಿವೃದ್ಧಿಗಾಗಿ ಬೆಂಗಳೂರಿನ 3559 ಮರಗಳು ಮತ್ತೆ ಕಣ್ಮರೆಯಾಗಲಿವೆಯಾ ಎಂಬ ಆತಂಕ ಶುರುವಾಗಿದೆ.
ಈ ಬಗ್ಗೆ ಮರ ತಜ್ಞರ ಸಮಿತಿ ಬಿಬಿಎಂಪಿ ಹಾಗೂ ಅರಣ್ಯ ಭವನದ ಅಧಿಕಾರಿಗಳ ಜೊತೆ ಈಗಾಗಲೇ ಸಭೆ ನಡೆಸಿದೆ. ಈ ಸಮಿತಿಯನ್ನು ಹೈಕೋರ್ಟ್ ನೇಮಿಸಿದ್ದು, ಇಂದು ಮತ್ತು ನಾಳೆ ಸ್ಥಳ ಪರಿಶೀಲನೆ ನಡೆಸುತ್ತಿದೆ. ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಗೆ ಮಾಗಡಿ ರಸ್ತೆ ಬಳಿ 1,822 ಮರಗಳು, ಕೆಆರ್ಡಿಸಿಎಲ್ ರಸ್ತೆ ಅಗಲೀಕರಣಕ್ಕೆ 1,116 ಮರಗಳು, ಬಿಎಂಆರ್ಸಿಎಲ್ ಮೆಟ್ರೋ ಕಾಮಗಾರಿಗಾಗಿ ಕಗ್ಗಲೀಪುರದಲ್ಲಿ 115 ಮರಗಳು, ಕಾಡುಗೋಡಿ-ಕೆಆರ್ ಪುರಂ ಮಾರ್ಗದಲ್ಲಿ 129 ಮರಗಳು, ಕಗ್ಗಲೀಪುರದಲ್ಲಿ ರಸ್ತೆ ಅಗಲೀಕರಣಕ್ಕೆ 377 ಮರಗಳ ತೆರವು ಅಗತ್ಯವಾಗಿದ್ದು, ಈಗಾಗಲೇ ಮಾರ್ಕಿಂಗ್ ನಡೆದಿದೆ.
ಆದರೆ, ಸಾಕಷ್ಟು ಯೋಜನೆಗೆ ಮರಗಳ ಕತ್ತರಿಸಿ ಹಾಕುತ್ತಾರೆ. ಮರು ನೆಡುವ ಕೆಲಸ ಆಗುತ್ತಿಲ್ಲ ಎಂದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪರಿಸರ ಪ್ರೇಮಿ ವಿಜಯ್ ನಿಶಾಂತ್, ನಗರದ ಮರಗಳು ಎಷ್ಟು ತೆರವಾಗಲಿದೆ ಎಂಬುದು ಸಮಿತಿಯ ಸ್ಥಳ ಪರಿಶೀಲನೆ ಬಳಿಕವಷ್ಟೇ ಗೊತ್ತಾಗಲಿದೆ. ರಸ್ತೆಗಾಗಿ ಮರ ಕತ್ತರಿಸಿದರೂ ಬೇರೆ ಕಡೆ ನೆಡುವ ಬಗ್ಗೆ ಅಥವಾ ಮರಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಅಧಿಕಾರಿಗಳು ತಲೆಕೆಡಿಸುಕೊಳ್ಳುವುದಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ಮರ ತೆರವು ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಪಾಲಿಕೆ ಅಧಿಕಾರಿಗಳು ಇದು ಬಿಬಿಎಂಪಿ ವ್ಯಾಪ್ತಿಗೆ ಬರೋದಿಲ್ಲ. ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲಿದೆ ಎಂದಿದ್ದಾರೆ.