ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್‌ರಹಿತ ಪ್ರಯಾಣಿಕರಿಂದ 6,77,190 ರೂಪಾಯಿ ದಂಡ ವಸೂಲಿ ಮಾಡಿದೆ. ಆದಾಯದ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ತನಿಖಾ ತಂಡಗಳು ಜನವರಿ ತಿಂಗಳಲ್ಲಿ ಒಟ್ಟು 16,226 ಟ್ರಿಪ್‌ಗಳನ್ನು ತಪಾಸಣೆ ನಡೆಸಿದೆ. ಈ ವೇಳೆ 3,591 ಟಿಕೆಟ್‌ರಹಿತ ಪ್ರಯಾಣಿಕರು ಪತ್ತೆಯಾಗಿದ್ದು, ನಿರ್ವಾಹಕರ ವಿರುದ್ಧವೂ 1,521 ಪ್ರಕರಣಗಳು ದಾಖಲಾಗಿವೆ.
ಮಹಿಳಾ ಪ್ರಯಾಣಿಕರಿಗೆಂದು ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 322 ಪುರುಷ ಪ್ರಯಾಣಿಕರಿಂದ ಒಟ್ಟು 32,200 ರೂಪಾಯಿ ಸಂಗ್ರಹವಾಗಿದೆ. ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ ದಂಡ ವಸೂಲಿ ಮಾಡಲಾಗಿದೆ. ಜನವರಿಯಲ್ಲಿ 3,913 ಪ್ರಯಾಣಿಕರಿಂದ ಒಟ್ಟು 7,09,390 ರೂ ದಂಡ ವಸೂಲಿಯಾಗಿದೆ.
ಪ್ರಯಾಣಿಕರು ಬಿಎಂಟಿಸಿ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್, ದಿನದ ಪಾಸು ಅಥವಾ ಮಾಸಿಕ ಪಾಸುಗಳನ್ನು ಹೊಂದಿರಬೇಕು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದು. ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗಲಿದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಜಾಗದಲ್ಲಿ ಮಹಿಳೆಯರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಅಂಬಾರಿ ಉತ್ಸವ ಬಸ್: ರಾಜ್ಯ ರಸ್ತೆ ಸಾರಿಗೆ ನಿಗಮದ 15 ಅಂಬಾರಿ ಉತ್ಸವ ಸ್ಲೀಪರ್ ವಾಹನಗಳಿಗೆ ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಮೊದಲ ಹಂತವಾಗಿ 50 ಸ್ಲೀಪರ್ ಬಸ್ಗಳ ಪೈಕಿ ಮೊದಲ ಹಂತವಾಗಿ 15 ಬಸ್ಗಳಿಗೆ ಚಾಲನೆ ನೀಡಲಾಗಿದೆ. ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ 'ಅಂಬಾರಿ ಉತ್ಸವ' ಎಂದು ಹೆಸರಿಡಲಾಗಿದೆ.
ಬಸ್ ಮೇಲ್ಮೈಯು ಏರೋಡೈನಾಮಿಕ್ ಮೇರುಕೃತಿ, ವೇಗದ ಕಾರ್ಯಾಚರಣೆಯಲ್ಲಿ ಗಾಳಿಯ ಸೆಳೆತ ತಗ್ಗಿಸಲು ಪೂರಕ ಹಾಗೂ ಇಂಧನ ಉಳಿತಾಯ 40 ಆಸನಗಳು, 2×1 ಆಸನದ ವ್ಯವಸ್ಥೆ ಹೊಂದಿದೆ. ಜೊತೆಗೆ ಪ್ರಯಾಣಿಕರಿಗೆ ಕುಳಿತುಕೊಳ್ಳುವ, ಮಲಗುವ ಸ್ಥಾನದಲ್ಲಿ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯವಿದೆ. ಕೆಳಗಿನ ಆಸನ 867 ಮಿ.ಮೀ., ಮೇಲಿನ ಆಸನ 850 ಮಿ.ಮೀ. ಹಾಗೂ ಹಿಂಬದಿ 790 ಮಿ.ಮೀ. ಕಂಪಾರ್ಟ್‌ಮೆಂಟ್ ಆಸನಗಳು. ಪ್ರತಿ ಮೇಲಿನ ಆಸನದಲ್ಲಿ ಜಾರುವುದನ್ನು ತಡೆಯಲು ಪಿಯು ಫೋಮ್ ಲ್ಯಾಡರ್, ಕೆಳಗಿನ ಆಸನವನ್ನು ಘನಾಕೃತಿಯೊಂದಿಗೆ ಅಳವಡಿಸಿ ಬಲಪಡಿಸಲಾಗಿದೆ.
ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸುಧಾರಿತ ಆಸನದ ಮೇಲೆ ಪ್ರೀಮಿಯಂ ರೆಕ್ಸಿನ್ ಹೊದಿಸಲಾಗಿದೆ. ಪರಿಸರ ಕಾಳಜಿ, ಸುರಕ್ಷತೆ, ಉತ್ತಮ ಗುಣಮಟ್ಟದ ಬಲಿಷ್ಠ ಸ್ಕ್ಯಾಂಡಿನೇವಿಯನ್ ವಿನ್ಯಾಸವಿದೆ. ಹಾಗೆ ಆಸನವು ಕ್ಯುಬಿಕಲ್ ಸಮಗ್ರ ಪರಿಕರ, ಓದಲು ಎರಡು ಲೈಟ್ ಗಳು, ಮೊಬೈಲ್ ಹೋಲ್ಡರ್, ಎರಡು ಯುಎಸ್ ಬಿ ಪೋರ್ಟ್, ವಿಶಾಲವಾದ ಗ್ಲಾಸ್ ಕಿಟಕಿಗಳ ವಿನ್ಯಾಸ, ವಿಹಂಗಮ ನೋಟದ ಆಸ್ವಾದ, ಆರಾಮದಾಯಕ ಪ್ರಯಾಣವಿರಲಿದೆ.
ಬಸ್ ಎಲ್ಲಿಂದ, ಎಲ್ಲಿಗೆ?: ಸದ್ಯ ಬಸ್ ಬೆಂಗಳೂರಿನಿಂದ ಸಿಕಂದರಾಬಾದ್, ಹೈದರಾಬಾದ್, ಎರ್ನಾಕುಲಂ, ತಿರುವನಂತಪುರಂ, ತ್ರಿಚೂರು, ಪಣಜಿ, ಕುಂದಾಪುರದಿಂದ ಬೆಂಗಳೂರು ಹಾಗೂ ಮಂಗಳೂರಿನಿಂದ ಪುಣೆಗೆ ಸಂಚಾರ ಮಾಡಲಿದೆ.