ಬೆಂಗಳೂರು: ಮೋಜಿನ ಜೀವನ, ಯುವತಿಯರೊಂದಿಗೆ ಶೋಕಿಗೆ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳ ಸೇರಿ ಮೂವರು ಆರೋಪಿಗಳನ್ನು ಹೆಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಅಲಿಯಾಸ್ ಬಾಲಾಜಿ, ಅನಿಲ್ ಹಾಗೂ ಯಶವಂತ್ ಬಂಧಿತರು. ಪ್ರಕಾಶ್ ಅಲಿಯಾಸ್ ಬಾಲಾಜಿ ಎಂಬಾತ 18 ವರ್ಷಗಳಿಂದ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದು ಇದುವರೆಗೂ 78 ಪ್ರಕರಣದಲ್ಲಿ ಭಾಗಿಯಾಗಿ ಅನೇಕ ಬಾರಿ ಸೆರೆವಾಸವನ್ನೂ ಅನುಭವಿಸಿದ್ದ.
ಜಾಮೀನು ಪಡೆದು ಜೈಲಿಂದ ಬಿಡುಗಡೆಯಾದ ಬಳಿಕವೂ ಮತ್ತದೇ ಕೃತ್ಯದಲ್ಲಿ ತೊಡಗಿದ್ದ. ಫುಡ್ ಡಿಲಿವೆರಿ ಬಾಯ್ ಸೋಗಿನಲ್ಲಿ ಸುತ್ತಾಡುತ್ತಿದ್ದು ಯಾರೂ ಇರದ ಮನೆಗಳನ್ನು ಗುರುತಿಸಿಕೊಂಡು ನಕಲಿ ಕೀ ಬಳಸಿ ನುಗ್ಗುತ್ತಿದ್ದ. ಮನೆಯಲ್ಲಿನ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ.
ಪ್ರತಿಷ್ಠಿತ ಯುರೋಪ್ ಹಾಗೂ ಗೋದ್ರೇಜ್ ಕಂಪನಿಯ ಲಾಕ್ ಸಿಸ್ಟಂ ಬಗ್ಗೆ ಅರಿತಿದ್ದ ಆರೋಪಿ ಕ್ಷಣಮಾತ್ರದಲ್ಲಿ ಬಾಗಿಲು ತೆರೆಯುವ ಕಲೆ ಕರಗತ ಮಾಡಿಕೊಂಡಿದ್ದ. ಕದ್ದ ಚಿನ್ನಾಭರಣದಲ್ಲಿ ಸ್ವಲ್ಪವನ್ನು ರೌಡಿಗಳಾದ ಅನಿಲ್ ಹಾಗೂ ಯಶವಂತ್‌ಗೆ ನೀಡಿ ಅವರ ಮೂಲಕ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದನಂತೆ. ಹೀಗೆ ಬಂದ ಹಣದಲ್ಲಿ ಯುವತಿಯರ ಜೊತೆ ಮೋಜು-ಮಸ್ತಿ ಮಾಡಿ, ಉಳಿದ ಚಿನ್ನವನ್ನು ಅವರಿಗೆ ಟಿಪ್ಸ್ ರೂಪದಲ್ಲಿ ಕೊಡುತ್ತಿದ್ದ.
ಇದೀಗ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿರುವ ಹೆಚ್ಎಸ್ಆರ್ ಲೇಔಟ್ ಪೊಲೀಸರು 75 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.
ವಿದೇಶಿ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪಿ ಬಂಧನ: ಭಾರತದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯಬೇಕು ಎಂಬ ಕನಸಿನಲ್ಲಿದ್ದ ವಿದೇಶಿ ವಿದ್ಯಾರ್ಥಿಗಳನ್ನ ಕಾಲೇಜು ಅಡ್ಮಿಷನ್ ಹೆಸರಿನಲ್ಲಿ ಕರೆಯಿಸಿಕೊಂಡು ವಂಚಿಸಿ, ಬಳಿಕ ಅವರು ಭಾರತದಲ್ಲಿ ನೆಲೆಸಲು ಅನುಕೂಲವಾಗುವಂತೆ ನಕಲಿ ಬೊನಾಫೈಟ್ ಸರ್ಟಿಫಿಕೇಟ್ ನೀಡುತ್ತಿದ್ದ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬರೋಬ್ಬರಿ 104 ವಿದೇಶಿ ವಿದ್ಯಾರ್ಥಿಗಳಿಗೆ ವಂಚಿಸಿದ್ದ ಸಮೀರ್ ಖಾನ್ ಬಂಧಿತ ಆರೋಪಿ.
ಸಂಜಯನಗರಲ್ಲಿರುವ ಖಾಸಗಿ ಪಿ.ಯು ಕಾಲೇಜೊಂದಕ್ಕೆ ಡಿಗ್ರಿ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಇತ್ತೀಚಿಗಷ್ಟೇ ಅನುಮೋದನೆ ಸಿಕ್ಕಿತ್ತು. ಕಾಲೇಜಿಗೆ ವಿದೇಶಿ ವಿದ್ಯಾರ್ಥಿಗಳ ಅಡ್ಮಿಷನ್ ಮಾಡಿಸಿಕೊಡುವುದಾಗಿ ಅದರ ಮುಖ್ಯಸ್ಥನೊಂದಿಗೆ ಆರೋಪಿ ಅಲಿಖಿತ ಒಪ್ಪಂದ ಮಾಡಿಕೊಂಡಿದ್ದ. ಅದರಂತೆ ಯೆಮನ್, ಸೌದಿ, ಇರಾನ್, ಸುಡಾನ್ ಹಾಗೂ ಐವರಿಕೋಸ್ಟ್ ಮೂಲದ ವಿದ್ಯಾರ್ಥಿಗಳನ್ನ ಕರೆಸಿಕೊಂಡು ಅಡ್ಮಿಷನ್ ಮಾಡಿಸಿದ್ದ. ಆದರೆ ಪ್ರಾಧ್ಯಾಪಕರು ಸೇರಿದಂತೆ ಸೂಕ್ತ ವ್ಯವಸ್ಥೆಗಳು ಸಿದ್ಧವಾಗಿರದ ಕಾರಣದಿಂದ ವಿದ್ಯಾರ್ಥಿಗಳು ಅತಂತ್ರವಾಗಿದ್ದರು.
ವ್ಯವಸ್ಥೆ ಸರಿಹೋಗುವವರೆಗೂ ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ನೆಲೆಸಲು ಬೇಕಾದ ಅಗತ್ಯ ಸೌಲಭ್ಯ ಪಡೆದುಕೊಳ್ಳಲು ಎಪ್.ಆರ್.ಆರ್.ಓ (ವಿದೇಶಿಗರ ಪ್ರಾದೇಶಿಕ ನೊಂದಣಿ ಕೇಂದ್ರ) ಕ್ಕೆ ಸಲ್ಲಿಸಲು ಕಾಲೇಜಿನ ಹೆಸರಿನಲ್ಲಿ ನಕಲಿ ದೃಢೀಕರಣ ಪ್ರಮಾಣಪತ್ರ ಸೃಷ್ಟಿಸಿ ವಿದ್ಯಾರ್ಥಿಗಳಿಗೆ ನೀಡಿದ್ದ. ಪ್ರಮಾಣಪತ್ರ ನಕಲಿ ಎಂಬುದು ಗೊತ್ತಾಗುತ್ತಿದ್ದಂತೆ ಎಫ್ಆರ್ಆರ್ಓ ಅಧಿಕಾರಿಯೊಬ್ಬರು ಸಂಜಯನಗರ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸಿಸಿಬಿಯ ವಿಶೇಷ ವಿಚಾರಣಾ ದಳದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಪ್ರಕರಣದಲ್ಲಿ ಕಾಲೇಜು ಆಡಳಿತ ಮಂಡಳಿಯ ಪಾತ್ರವಿರುವ ಕುರಿತು ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿಯ ಜಂಟಿ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ:ಕೊಲೆ ಪ್ರಕರಣದಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಂಡ: 17 ವರ್ಷದ ಬಳಿಕ ಕಳ್ಳತನ ಪ್ರಕರಣದಲ್ಲಿ ಬಂಧನ