ಬೆಂಗಳೂರು: ವೀಸಾ ಇಲ್ಲದೇ ಅಕ್ರಮವಾಗಿ ಬೋಟ್ ಮುಖಾಂತರ ಶ್ರೀಲಂಕಾದಿಂದ ಭಾರತಕ್ಕೆ ನುಸುಳಿ, ಬಳಿಕ ನಗರಕ್ಕೆ ಬಂದಿದ್ದ ಸುಪಾರಿ ಕಿಲ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಜೈ ಪರಮೇಶ್ ಹಾಗೂ ಶ್ರೀಲಂಕಾ ಪ್ರಜೆಗಳಾದ ಕಸನ್ ಕುಮಾರ ಸನಕ, ಅಮಿಲಾ ನೂವಾನ್ ಮತ್ತು ರಂಗಪ್ರಸಾದ್ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಕಿಲ್ಲರ್ಗಳಿಗೆ ರೌಡಿಶೀಟರ್ ಜೈ ಪರಮೇಶ್ ಆಶ್ರಯ ನೀಡಿದ್ದ. ವೀಸಾ ಪಾಸ್‌ಪೋರ್ಟ್ ಇಲ್ಲದೇ ಬೋಟ್ ಮೂಲಕ ಭಾರತದ ಗಡಿ ಪ್ರವೇಶಿಸಿರುವ ಶ್ರೀಲಂಕಾ ಆರೋಪಿಗಳು ಸೇಲಂನಿಂದ ಬೆಂಗಳೂರು ತಲುಪಿದ್ದರು. ಸದ್ಯ ರೌಡಿಶೀಟರ್ ಮನೆ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರ ಮೇಲಿವೆ ಹಲವು ಪ್ರಕರಣ: ಕಳೆದ 20 ದಿನಗಳ ಹಿಂದೆ ಭಾರತಕ್ಕೆ ನುಸುಳಿದ್ದ ಶ್ರೀಲಂಕಾ ಪ್ರಜೆಗಳು, ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯ ಅಪಾರ್ಟ್ಮೆಂಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಶ್ರೀಲಂಕಾದಲ್ಲಿ ಈ ಮೂವರ ಮೇಲೆ ಸರಣಿ ಕೊಲೆ ಪ್ರಕರಣ ಇದ್ದು, ಸಿಸಿಬಿ ಪ್ರಾಥಮಿಕ ವಿಚಾರಣೆ ವೇಳೆ ತಮ್ಮ ಅಪರಾಧ ಹಿನ್ನೆಲೆ ಬಗ್ಗೆ ಆರೋಪಿಗಳು ಬಿಚ್ಚಿಟ್ಟಿದ್ದಾರೆ. ಕಸನ್ ಕುಮಾರ ಮೇಲೆ ನಾಲ್ಕು ಕೊಲೆ ಪ್ರಕರಣ, ಅಮಿಲಾ ನೂವಾನ್ ಮೇಲೆ ಐದು ಕೊಲೆ ಕೇಸ್ ಹಾಗೂ ರಂಗಪ್ರಸಾದ್ ಮೇಲೆ ಎರಡು ಕೊಲೆ ಮತ್ತು ಎರಡು ಹಲ್ಲೆ ಪ್ರಕರಣ ದಾಖಲಾಗಿದೆ.
ಸಿಸಿಬಿ ದಾಳಿ ವೇಳೆ 13 ಮೊಬೈಲ್ ಫೋನ್, ಶ್ರೀಲಂಕಾ ವಿಳಾಸದ ವಿಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟ್ಟಿಂಗ್ಸ್, ಹಲವು ಮಂದಿಯ ಆಧಾರ್, ವೋಟರ್ ಐಡಿಯ ಜೆರಾಕ್ಸ್ ಪ್ರತಿಗಳು ಪತ್ತೆಯಾಗಿದೆ. ಆರೋಪಿಗಳು ಬೆಂಗಳೂರಿನಲ್ಲಿ ಕಾನೂನು ಬಾಹಿರ ಕೃತ್ಯ ಎಸಗಲು ಸಂಚು ರೂಪಿಸಿದ್ದರಾ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.
ಸದ್ಯ ರೌಡಿಶೀಟರ್ ಜೈ ಪರಮೇಶ್ ಹಾಗೂ ಮೂವರು ಶ್ರೀಲಂಕಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲಂಕಾ ಆರೋಪಿಗಳು ಸಿಂಹಳ ಭಾಷೆ ಮಾತಾನಾಡುತ್ತಿದ್ದು, ಹಿಂದಿ ಇಂಗ್ಲಿಷ್ ಬಾರದಿರುವುದು ವಿಚಾರಣೆಗೆ ತೊಡಕಾಗಿದೆ. ರೌಡಿಶೀಟರ್ ಜೈ ಪರಮೇಶ್ಗೂ ಸಿಂಹಳ ಭಾಷೆ ಬರುವುದಿಲ್ಲ. ಆದರೆ, ಮೂರನೇ ವ್ಯಕ್ತಿಯ ಅಣತಿ ಮೇರೆಗೆ ಈ ಮೂವರನ್ನೂ ಸೇಲಂನಿಂದ ಕರೆತಂದಿದ್ದ ಜೈ ಪರಮೇಶ್, ಬೆಂಗಳೂರಿನಲ್ಲಿ ಆಶ್ರಯ ನೀಡಿದ್ದ ಎಂದು ತಿಳಿದು ಬಂದಿದೆ.
ಸದ್ಯ ಆ ಮೂರನೇ ವ್ಯಕ್ತಿಯು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದು, ಸಿಸಿಬಿ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಬಂಧನ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Bengaluru crime: ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಸಂಚು.. ಕುಖ್ಯಾತ ರೌಡಿಗಳ ವಿರುದ್ಧ ಎಫ್ಐಆರ್