ಬೆಂಗಳೂರು : ನಾಲ್ಕು ಬಾರಿ ಮುಖ್ಯಮಂತ್ರಿ ಆದರೂ ಪೂರ್ಣಾವಧಿ ಮುಗಿಸುವ ಭಾಗ್ಯ ಯಡಿಯೂರಪ್ಪಗೆ ಒಮ್ಮೆಯೂ ಇಲ್ಲದಂತಾಗಿದೆ. ಹೋರಾಟಗಾರ, ಛಲಗಾರನಾದರೂ ಅವಧಿ ಮುಗಿಸದೆ ಈಗಲೂ ವಿದಾಯ ಹೇಳಲು ಮುಂದಾಗಿದ್ದಾರೆ. ವಯಸ್ಸು, ಪುತ್ರನ ಹಸ್ತಕ್ಷೇಪ, ಪಕ್ಷದಲ್ಲಿನ ಅಂತರ್ಯುದ್ಧಕ್ಕೆ ಸಿಎಂ ಹುದ್ದೆ ಬಿಡಬೇಕಾಗುತ್ತಿದೆ ಎನ್ನಲಾಗಿದೆ.
ಶಿಕಾರಿಪುರದಲ್ಲಿ ವೀರಭದ್ರಪ್ಪ ಎನ್ನುವವರ ಅಕ್ಕಿ ಮಿಲ್ನಲ್ಲಿ ಅಕೌಂಟೆಂಟ್ ಆಗಿದ್ದ ಯಡಿಯೂರಪ್ಪ, 1978ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾಗುವ ಮೂಲಕ ಚುನಾವಣಾ ರಾಜಕೀಯ ಜೀವನ ಆರಂಭಿಸಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದು ಮಹಾನ್ ಸಾಧನೆ. ಆದರೆ, ನಾಲ್ಕನೇ ಬಾರಿಯೂ ಅವಧಿ ಪೂರ್ಣಗೊಳಿಸದೇ ಕುರ್ಚಿ ಖಾಲಿ ಮಾಡುತ್ತಿರುವುದು ಮಾತ್ರ ಮಹಾ ವಿಪರ್ಯಾಸ. ಕರ್ನಾಟಕದಲ್ಲಿ ಕಮಲ ಅರಳಲು ಬೇರುಮಟ್ಟದಿಂದ ದುಡಿದ ಶಿಕಾರಿವೀರ ಈಗ ಹುದ್ದೆ ತ್ಯೆಜಿಸುವ ಸಂದಿಗ್ಧ ಸ್ಥಿತಿ ಎದುರಿಸುತ್ತಿದ್ದಾರೆ.
ಸಿಎಂ ನಡೆದು ಬಂದ ಹಾದಿ : ಮೊದಲ ಬಾರಿ 2008ರಲ್ಲಿ ಮುಖ್ಯಮಂತ್ರಿ ಆದ ಸಿಎಂ ಯಡಿಯೂರಪ್ಪ, ಕೇವಲ7 ದಿನಕ್ಕೆ ಬಹುಮತವಿಲ್ಲದೆ ರಾಜೀನಾಮೆ ನೀಡಿದರು. ನಂತರ ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಬಹುಮತ ಸಾಬೀತುಪಡಿಸಿ, 3.2 ವರ್ಷ ಆಳ್ವಿಕೆ ನಡೆಸಿ ಅವಧಿ ಪೂರ್ಣಗೊಳಿಸದೆ ರಾಜೀನಾಮೆ ನೀಡಿದರು. ಈಗ ಮತ್ತೆ ಅಂತಹ ಸನ್ನಿವೇಶವೇ ಎದುರಾಗಿದೆ. 2018ರಲ್ಲಿ 3 ದಿನ ಆಡಳಿತ ನಡೆಸಿ ಬಹುಮತ ಸಾಬೀತುಪಡಿಸಲಾಗದೆ ರಾಜೀನಾಮೆ ನೀಡಿದ್ದರು.
ಆದರೆ, 2019ರಲ್ಲಿ ಬಹುಮತ ಸಾಬೀತುಪಡಿಸಿದ್ದ ಯಡಿಯೂರಪ್ಪ ಈಗ 2 ವರ್ಷ ಮುಗಿಸುತ್ತಿದ್ದು, ಈಗಲೂ ಅವಧಿ ಮುಗಿಸುವ ಮೊದಲೇ ರಾಜೀನಾಮೆ ನೀಡುತ್ತಿದ್ದಾರೆ. ಬಹುಮತವಿಲ್ಲದೆ ಎರಡು ಬಾರಿ ರಾಜೀನಾಮೆ ನೀಡಿದ್ದ ಯಡಿಯೂರಪ್ಪ, ಅವಧಿ ಮುಗಿಸದೆ ಈಗ ಎರಡನೇ ಬಾರಿ ರಾಜೀನಾಮೆಗೆ ಮುಂದಾಗಿದ್ದಾರೆ. ಅದೂ ಕೂಡ ಮೊದಲ ಬಾರಿ ಜುಲೈ 31, ಈಗ 2ನೇ ಬಾರಿಯೂ ಜುಲೈನಲ್ಲೇ ರಾಜೀನಾಮೆ ಹೈಡ್ರಾಮಾ ನಡೆಯುತ್ತಿರುವುದು ವಿಶೇಷ.
ವಯಸ್ಸು, ಪುತ್ರ, ಅಂತರ್ಯುದ್ಧ : ಯಡಿಯೂರಪ್ಪ ರಾಜೀನಾಮೆ ನೀಡುವ ಅನಿವಾರ್ಯತೆಗೆ ಸಿಲುಕಲು ಪ್ರಮುಖವಾಗಿ ಮೂರು ಕಾರಣಗಳಿವೆ. ಅದರಲ್ಲಿ ಮೊದಲನೆಯದ್ದು ವಯಸ್ಸು. 75 ವರ್ಷದ ಗಡುವನ್ನು ಉಲ್ಲೇಖಿಸಿ ವಯಸ್ಸಿನ ಕಾರಣ ರಾಜೀನಾಮೆಗೆ ಸಂದೇಶ ನೀಡುತ್ತಿದ್ದಾರೆ. 75 ವರ್ಷ ದಾಟಿದವರು ಸರ್ಕಾರದ ಪ್ರಮುಖ ಹುದ್ದೆಯಲ್ಲಿರಬಹುದು ಎನ್ನುವ ಅಲಿಖಿತ ನಿಯಮವಿದೆ. ಹಾಗಾಗಿ, ಈ ನಿಯಮ ಪಾಲಿಸಲು ಲಾಲ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೋಶಿ ಅವರನ್ನು ಮಾರ್ಗದರ್ಶನ ಮಂಡಳಿಯಲ್ಲಿ ಕೂರಿಸಿದೆ. ಅದರಂತೆ ಈಗ ನನ್ನ ವಿಚಾರದಲ್ಲಿಯೂ ವಯಸ್ಸು ಕಾರಣ ಎನ್ನುವುದನ್ನು ಯಡಿಯೂರಪ್ಪ ಬಹಿರಂಗವಾಗಿ ಹೇಳಿದ್ದಾರೆ.
ಇನ್ನು, ಎರಡನೆಯದ್ದು ಪುತ್ರ ವಿಜಯೇಂದ್ರ ವಿರುದ್ಧ ಕೇಳಿ ಬಂದ ಆಡಳಿತದಲ್ಲಿನ ಹಸ್ತಕ್ಷೇಪದ ಆರೋಪ. ವಿಜಯೇಂದ್ರ ಎಲ್ಲಾ ಇಲಾಖೆಯ ಅನುದಾನ ಬಿಡುಗಡೆ, ವರ್ಗಾವಣೆ ಸೇರಿ ಎಲ್ಲ ವಿಷಯದಲ್ಲೂ ಹಸ್ತಕ್ಷೇಪ ಇದೆ ಎನ್ನುವ ಆರೋಪ ಕೇಳಿ ಬಂದಿತ್ತು. ಹೈಕಮಾಂಡ್ವರೆಗೂ ಈ ಆರೋಪ ತಲುಪಿತ್ತು. ರಾಜ್ಯ ಉಸ್ತುವಾರಿ ಆಗಮಿಸಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ್ದ ವೇಳೆಯಲ್ಲಿಯೂ, ಶಾಸಕರು ವಿಜಯೇಂದ್ರ ವಿರುದ್ಧ ಆರೋಪ ಮಾಡಿದ್ದರು. ಇದು ಅಪ್ಪನ ಅಧಿಕಾರ ಮಗ ಚಲಾಯಿಸುತ್ತಿರುವ ಆರೋಪಕ್ಕೆ ಯಡಿಯೂರಪ್ಪ ಅವರನ್ನು ಸಿಲುಕುವಂತೆ ಮಾಡಿದೆ.
ಮೂರನೆಯದ್ದು ಬಿಜೆಪಿಯಲ್ಲಿನ ಒಳಜಗಳ. ಅಧಿಕಾರಕ್ಕೆ ಬಂದ ದಿನದಿಂದಲೂ ಬಿಜೆಪಿಯಲ್ಲಿ ಬಣ ರಾಜಕೀಯ ಶುರುವಾಗಿದೆ. ಸರ್ಕಾರ ರಚನೆಗೆ ಕಾರಣ ಎನ್ನುವ ಕಾರಣಕ್ಕೆ ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡುವುದರ ಜೊತೆ ಪ್ರಮುಖ ಖಾತೆ ನೀಡಿದ್ದಕ್ಕೆ ಪಕ್ಷ ನಿಷ್ಠರು ಗರಂ ಆಗಿದ್ದಾರೆ. ಪದೇಪದೆ ಪ್ರತ್ಯೇಕ ಸಭೆಯಂತಹ ಚಟುವಟಿಕೆ ನಡೆಸಿ ಪಕ್ಷಕ್ಕೆ ಇರುಸು-ಮುರುಸಾಗುವಂತೆ ಮಾಡಿದ್ದಾರೆ. ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡಿದರೂ ಅದನ್ನು ನಿಲ್ಲಿಸುವಲ್ಲಿ ವಿಫಲವಾಗಿದ್ದು, ಪಕ್ಷದಲ್ಲಿ ನಾಯಕತ್ವ ಕೂಗು ಹೆಚ್ಚಾಗುವಂತೆ ಮಾಡಿತು.
ಅಧಿಕಾರ ಸ್ವೀಕಾರಕ್ಕೂ ಕಾದಿದ್ದ ಬಿಎಸ್‌ವೈ : ತರಾತುರಿಯಲ್ಲಿ ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದರು. ಮೈತ್ರಿ ಸರ್ಕಾರ ಪತನದ ನಂತರವೂ ಹೈಕಮಾಂಡ್ ಯಡಿಯೂರಪ್ಪಗೆ ಪಟ್ಟಕಟ್ಟಲು ಮುಂದಾಗಿರಲಿಲ್ಲ. ಪ್ರಮಾಣವಚನ ಸ್ವೀಕಾರಕ್ಕಾಗಿ ಯಡಿಯೂರಪ್ಪ ಹೈಕಮಾಂಡ್ ಸೂಚನೆಗಾಗಿ ಕಾದು ಕುಳಿತಿದ್ದರು. ಕಾದು-ಕಾದು ಕಡೆಗೆ ಅನುಮತಿ ಸಿಗುತ್ತಂತೆ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಅದೂ ಕೂಡ ಒಬ್ಬರೆ ಒಬ್ಬರೂ ಪ್ರಮಾಣವಚನ ಸ್ವೀಕಾರ ಮಾಡಿದರು. ತಿಂಗಳುಗಟ್ಟಲೆ ಒನ್ ಮ್ಯಾನ್ ಕ್ಯಾಬಿನೆಟ್ ಆಡಳಿತ ನಡೆಸಿದರು. ನಂತರ ಸಂಪುಟ ವಿಸ್ತರಣೆ ನಡೆಯಿತು.
ಈಗ ಎರಡು ವರ್ಷದ ಆಡಳಿತದಲ್ಲಿ ಇಳಿವಯಸ್ಸಿನಲ್ಲಿಯೂ ತುಂಬಾ ಸಕ್ರಿಯವಾಗಿ ಕೆಲಸ ಮಾಡಿದ್ದರೆ, ಪಕ್ಷಕ್ಕೆ ವರ್ಚಸ್ಸು ತರುವಂತೆ ಕೆಲಸ ಮಾಡಿದ್ದಾರೆೆ ಅವರನ್ನೇ ಮುಂದುವರಿಸುವ ಸಾಧ್ಯತೆ ಇತ್ತು. ಆದರೆ, ಅಂತಹ ವಾತಾವರಣ ನಿರ್ಮಾಣ ಮಾಡಲು ಯಡಿಯೂರಪ್ಪಗೆ ಸಾಧ್ಯವಾಗಲಿಲ್ಲ ಎನ್ನುವುದು ಬಿಜೆಪಿ ವಲಯದಲ್ಲಿನ ವಿಶ್ಲೇಷಣೆ. ಇದರ ಜೊತೆಗೆ ಯಡಿಯೂರಪ್ಪಗೆ ಈಗ 80 ವರ್ಷ ತುಂಬುತ್ತಿದೆ. ಎಂಬತ್ತು ವರ್ಷ ತುಂಬಿದ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಮುಂದಿನ ವಿಧಾನಸಭಾ ಚುನಾವಣೆಗೆ ಹೋಗುವುದು ವರಿಷ್ಠರಿಗೆ ಇಷ್ಟವಿಲ್ಲ. ಹಾಗಾಗಿ, ನಾಯಕತ್ವ ಬದಲಾವಣೆ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ ಎನ್ನಲಾಗಿದೆ.