ಬೆಂಗಳೂರು: ರೈತರ ಪಂಪ್ಸೆಟ್ಗಳಿಗೆ ಪ್ರಸ್ತುತ ನೀಡುತ್ತಿರುವ ಏಳು ಗಂಟೆಗಳ ತ್ರಿಫೇಸ್ ವಿದ್ಯುತ್ ಸಮಯವನ್ನು ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ 70 ಪ್ರತಿಶತಕ್ಕಿಂತ ಹೆಚ್ಚಿನ ರೈತರ ಪಂಪ್ಸೆಟ್ಗಳಿಗೆ ಎಷ್ಟು ಗಂಟೆ ತ್ರಿಫೇಸ್ ವಿದ್ಯುತ್ ಕೊಡುತ್ತಿದ್ದಿರಾ ಎಂಬ ಪ್ರಶ್ನೆಗೆ 7 ತಾಸು ಕೊಡುತ್ತಿದ್ದೇವೆ ಎಂದು ಉತ್ತರಿಸಿದರು. ಏಳು ಗಂಟೆಗಳು ನೀಡುವ ವಿದ್ಯುತ್ ದಿನಕ್ಕೆ ಏಳು ಸಾರಿ ತೆಗೆಯುತ್ತಾರೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದು, ಖರೀದಿ ಮಾಡುವವರಿಲ್ಲ.
ಪರಿಸ್ಥಿತಿ ಹೀಗಿದ್ದರೂ ರೈತರಿಗೆ ಹೆಚ್ಚಿನ ಸಮಯ ವಿದ್ಯುತ್ ಕೊಡಲು ಸಾಧ್ಯವಾಗದಿರುವುದಕ್ಕೆ ಕಾರಣ ಏನು?. ಮೊದಲು ದುಪ್ಪಟ್ಟು ಕೊಟ್ಟು ವಿದ್ಯುತ್ ಖರೀದಿ ಮಾಡಲಾಗುತ್ತಿತ್ತು. ಈಗ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲಾಗುತ್ತಿದೆ. ರೈತರಿಗೆ ಹೆಚ್ಚಿನ ಸಮಯ ವಿದ್ಯುತ್ ಕೊಡಬೇಕೆಂದು ಆಗ್ರಹಿಸಿದರು.
ಪ್ರಸ್ತುತ ನೀಡುತ್ತಿರುವ ಏಳು ತಾಸು ವಿದ್ಯುತ್ ಸಮಯವನ್ನು ಹೆಚ್ಚಿಸಬೇಕು. ನೀವು ರೈತರ ಪರವಾಗಿದ್ದೀವಿ ಅಂತ ಹೇಳುತ್ತಿದ್ದೀರಿ. ಮತ್ಯಾಕೆ ರೈತರ ಪಂಪ್ಸೆಟ್ಗಳಿಗೆ ಹೆಚ್ಚಿನ ವಿದ್ಯುತ್ ನೀಡಬಾರದು ಎಂದು ಪ್ರಶ್ನಿಸಿದರು.
ಇದಕ್ಕೆ ಮುಖ್ಯಮಂತ್ರಿಗಳ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರ ನೀಡಿ, ಶಾಸಕರ ಸಲಹೆಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸುವ ಭರವಸೆ ನೀಡಿದರು. ಇದು ಗಂಭೀರವಾದ ವಿಷಯವಾಗಿದೆ. ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕು. ಚರ್ಚೆಗೆ ಅವಕಾಶ ಕೊಡಿ ಎಂದು ಹಲವು ಶಾಸಕರು ಮನವಿ ಮಾಡಿದರು.
ಇದನ್ನೂ ಓದಿ: ಶಿವರಾತ್ರಿ ಹಬ್ಬದ ಪ್ರಯುಕ್ತ ಮಾ.11 ರಿಂದ 14 ರವರೆಗೆ ಸದನಕ್ಕೆ ರಜೆ